ಗದಗ,ಜು.07 – ವಿದ್ಯಾಭ್ಯಾಸವು ಕೇವಲ ಪಠ್ಯಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಜೀವನ ಮೌಲ್ಯಗಳನ್ನು ಅರಿತು, ವ್ಯಕ್ತಿತ್ವವನ್ನು ಘನಗೊಳಿಸುವ ಪ್ರಕ್ರಿಯೆಯೆಂಬ ನಿಲುವಿನಲ್ಲಿ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ ಮತ್ತೊಂದು ಪ್ರಾಮಾಣಿಕ ಹೆಜ್ಜೆ ಇಟ್ಟಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸದಭಿರುಚಿಯ ಹಾಗೂ ಸಾರ್ಥಕ ಸನ್ನಿವೇಶ ನೀಡುವ ಉದ್ದೇಶದಿಂದ ಪ್ರೇರಣಾದಾಯಕ ಕನ್ನಡ ಚಲನಚಿತ್ರ “ಮುನ್ನುಡಿ” ಯನ್ನು ವಿಶೇಷವಾಗಿ ಪ್ರದರ್ಶಿಸಲಾಯಿತು.
ಪ್ರದರ್ಶನ ಉದ್ಘಾಟನೆ ವೇಳೆ ಮಹಾವಿದ್ಯಾಲಯದ ಚೇರ್ಮನ್ ಪ್ರೊ. ರಾಜೇಶ್ ಕುಲಕರ್ಣಿ ಮಾತನಾಡಿ, “ಯಾವುದೇ ಸಾಧನೆಗೆ ಮೊದಲ ಹೆಜ್ಜೆ ನಮ್ಮ ಆಸಕ್ತಿಯಾಗಿದೆ. ಈ ಆಸಕ್ತಿ ಉತ್ಸಾಹವನ್ನಾಗಿ ಪರಿವರ್ತಿಸಿ, ಅದನ್ನು ಛಲ ಹಾಗೂ ಪರಿಶ್ರಮದಿಂದ ನಾವೇ ನವ ಆಕಾಶಗಳನ್ನು ಮುಟ್ಟಬೇಕು. ಈ ಚಿತ್ರ, ಅದರಲ್ಲಿರುವ ‘ಶಿವು’ ಎಂಬ ಪಾತ್ರದ ಹಿನ್ನಲೆ, ಜೀವನ ಪಾಠವಾಗಿ ಪರಿಣಮಿಸಲಿ ಎಂಬ ಆಶಯದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ,” ಎಂದು ತಿಳಿಸಿದರು.
ಇದೇ ವೇಳೆ ಸಂಸ್ಥೆಯ ನಿರ್ದೇಶಕ ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಅವರು, “ಬಡತನ, ಹಳ್ಳಿಯ, ಕನ್ನಡ ಮಾಧ್ಯಮದಲ್ಲಿ ಓದಿದ ಪರಿಸ್ಥಿತಿ, ಯಾರಲ್ಲೂ ತಾನಿಲ್ಲ ಎನ್ನುವುದು, ನಿಮ್ಮೊಳಗಿನ ಅಂತಃಶಕ್ತಿ, ಆತ್ಮವಿಶ್ವಾಸ, ಮತ್ತು ಸಾಧನೆಗೆ ಬೇಕಾದ ಹಠವಿದ್ದರೆ ನೀವು ಯಶಸ್ಸನ್ನು ತಲುಪಬಹುದು ಅನ್ನೋ ಸಂದೇಶಗಳೊಂದಿಗೆ ಈ ‘ಮುನ್ನುಡಿ’ಚಿತ್ರವು ಅದಕ್ಕೆ ಪ್ರಾಮಾಣಿಕ ಸಾಕ್ಷಿಯಾಗಿದೆ,” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶವನ್ನು ಹಂಚಿದರು.
“ಮುನ್ನುಡಿ” ಚಲನಚಿತ್ರವು ಹಿನ್ನಲೆ ಬಡತನವಿದ್ದರೂ ಅದೆಲ್ಲವನ್ನೂ ದಾಟಿ ಮುನ್ನಡೆದ ಶಿವು ಎಂಬ ವಿದ್ಯಾರ್ಥಿಯ ಜೀವನದ ಪ್ರೇರಣಾದಾಯಕ ಪಯಣವನ್ನು ಒಳಗೊಂಡಿದೆ. ಈ ಕಥನ ಯುವ ಮನಸ್ಸಿಗೆ ಸ್ಪೂರ್ತಿ ನೀಡುವಂಥದು.
ವಿದ್ಯಾರ್ಥಿಗಳ ಪ್ರಭಾವಿತ ಪ್ರತಿಕ್ರಿಯೆ:
ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಚಿತ್ರವನ್ನು ಒಟ್ಟಾರೆ ಮೆಚ್ಚುಗೆ ಹಾಗೂ ಉತ್ಸಾಹದಿಂದ ವೀಕ್ಷಿಸಿ, ತಮ್ಮಲ್ಲಿಯೇ ಸಾಧನೆಯ ಸಂಕಲ್ಪವೊಂದನ್ನು ಮೂಡಿಸಿಕೊಂಡರು. ಕೆಲವರು “ಇದು ನಮ್ಮ ಬದುಕಿಗೆ ಕಣ್ಣು ತೆರೆಯುವ ಅನುಭವವಾಯಿತು,” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಪ್ರದರ್ಶನದ ಮುಕ್ತಾಯ ಸಮಾರಂಭ
ಚಲನಚಿತ್ರ ಪ್ರದರ್ಶನದ ಸಮಾಪನ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಲ್ಲಿ ನೈತಿಕ ಚೇತನವನ್ನು ಬೆಳೆಸಿದ ಚಿತ್ರ ತಂಡದ ಕಾರ್ಯಕ್ಷಮತೆಯನ್ನ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೆಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ,ಪ್ರೊ.ಸೈಯ್ಯದ್ ಮತೀನ್ ಮುಲ್ಲಾ,ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಹಾಗೂ ಪ್ರಾಚಾರ್ಯರಾದ ಪ್ರೇಮಾನಂದ ರೋಣದ, ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರಂತರ ಶಿಕ್ಷಣದ ಪಥದಲ್ಲಿ ವಿದ್ಯಾ ದೀಪವನ್ನು ಬೆಳಗಿಸುತ್ತಿರುವ ಸನ್ಮಾರ್ಗ ಪಿ.ಯು. ಮಹಾವಿದ್ಯಾಲಯ ಈ ರೀತಿಯ ಪ್ರೇರಣಾದಾಯಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನೂ ಉಜ್ವಲ ಭವಿಷ್ಯದತ್ತ ದಾರಿ ಮಾಡಿಕೊಡುತ್ತಿದೆ.