Headlines

ಸಿಇಟಿ-ನೀಟ್ ತರಬೇತಿಗೆ ಸನ್ಮಾರ್ಗ ಮಹಾವಿದ್ಯಾಲಯ – ಆರಾಧನಾ ವುಮೆನ್ಸ್ ಫೌಂಡೇಶನ್ ಜೊತೆಗೆ ಒಡಂಬಡಿಕೆ..

ಗದಗ, ಏಪ್ರಿಲ್ 9:ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರವಾದದ್ದು. ಈ ನಿಟ್ಟಿನಲ್ಲಿ ಶಿಕ್ಷಣವೇ ಸಮರ್ಥ ಸಮಾಜದ ಮೂಲ ಆಧಾರವೆಂಬ ನಂಬಿಕೆಯಿಂದ ‘ಆರಾಧನಾ ವುಮೆನ್ಸ್ ಫೌಂಡೇಶನ್’ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಪಾತ್ರ ನಿರ್ವಹಿಸಲು ಮುಂದಾಗಿದೆ.

ಈ ದೃಷ್ಟಿಕೋನದಲ್ಲಿ, ಗದಗಿನ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ‘ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿ’ಯ ‘ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ’ದೊಂದಿಗೆ ಆರಾಧನಾ ವುಮೆನ್ಸ್ ಫೌಂಡೇಶನ್ ಶ್ರೇಷ್ಠ ಒಡಂಬಡಿಕೆ ಮಾಡಿಕೊಂಡಿದೆ.ಈ ಸಹಯೋಗದೊಂದಿಗೆ ಸಿಇಟಿ, ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶವಿದೆ.

ಅನುಭವಸಂಪನ್ನ ಉಪನ್ಯಾಸಕರಿಂದ ಈ ತರಬೇತಿಯನ್ನು ನಿಭಾಯಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ಕಿರಣವನ್ನು ನೀಡುವ ಗುರಿ ಹೊಂದಲಾಗಿದೆ. ಈ ಪ್ರಗತಿಪರ ಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹೊಸ ಬೆಳಕು ಮೂಡಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಪ್ರೊ. ರಾಜೇಶ್ ಕುಲಕರ್ಣಿಯವರು, “ಸ್ರ್ತೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ ಸ್ರ್ತೀಗೂ ಅವಿನಾಭಾವ ಸಂಬಂಧವಿದೆ. ಪ್ರಕೃತಿಯನ್ನು ಪ್ರಕೃತಿಮಾತೆ, ಭೂಮಿಯನ್ನು ಭೂಮಾತೆ ಎಂಬ ಮಹಿಳಾ ವಿಶೇಷಣವೇ ಅವಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಮಹಿಳೆ ಭೂಮಿಯಾಗಿ, ಮುಗಿಲಾಗಿ, ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹೀಗಾಗಿ ‘ಸ್ರ್ತೀ ಸಮೃದ್ಧಿಯ ಸಂಕೇತ’ ಎಂದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ” ಎಂದರು.

ಒಂದು ಜೀವವನ್ನು ಸೃಷ್ಟಿಸುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಸಾಂತ್ವನ ಮುಂತಾದ ವಾತ್ಸಲ್ಯಭರಿತ ಗುಣಗಳನ್ನು ತಮ್ಮ ಬೋಧನೆಯಲ್ಲಿ ಆಗಾಗ ಸಂದರ್ಭಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ನೀಡುತ್ತಾ ವಿದ್ಯಾರ್ಥಿಗಳ ‘ಆರಾಧನಾ ಶಕ್ತಿ’ಯಾಗಿ ರೂಪುಗೊಂಡಿದೆ ‘ಆರಾಧನಾ ವುಮೆನ್ಸ್ ಫೌಂಡೇಶನ್ ಸಂಸ್ಥೆ’ಯ ಈ ವಿಧದ ಆರಾಧನಾ ಭಾವವು ವಿದ್ಯಾರ್ಥಿಗಳ ಮನದುಂಬಿ ಜ್ಞಾನಾರಾಧನೆಯ ಮೂಲಕ ಅವರೆಲ್ಲರ ಜ್ಞಾನಕ್ಷಿತಿಜವು ತೇಜಃಪುಂಜವಾಗಿ ವೃದ್ಧಿಸಲಿ ಎಂದು ನಮ್ಮೆಲ್ಲರ ಆಪೇಕ್ಷೆ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *