ಗದಗ ೧೪: “ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಸ್ವಂತ ಪ್ರೇರೇಪಣೆಯಿಂದ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮಾತ್ರ ಮುನ್ನಡೆ ಅಥವಾ ಪ್ರಗತಿ ಸಾಧ್ಯ”ಎಂದು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ ಗದಗ ನಿರ್ದೇಶಕ ಪ್ರೊ. ಉಡುಪಿ ದೇಶಪಾಂಡೆ ಅಭಿಪ್ರಾಯ ಪಟ್ಟರು.
ಅವರು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಬಿಂಕದಕಟ್ಟಿಯ ಪ್ರಾಣಿ ಸಂಗ್ರಹಾಲಯದಲ್ಲಿ ಜರುಗಿದ ‘ಪ್ರೇರೇಪಣಾ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನಾ’ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಪಠ್ಯದ ಜೊತೆಗೆ ಪ್ರತಿವಾರವೂ ಇಂಥಹ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ಜೀವನದಲ್ಲಿ ಪ್ರಗತಿ ನೆಮ್ಮದಿ ಕಾಣಿರಿ ಎಂದು ಹತ್ತು ಹಲವಾರು ಉದಾಹರಣೆಗಳನ್ನು ನೀಡುತ್ತಾ ವಿದ್ಯಾರ್ಥಿಗಳನ್ನು ಕ್ರಿಯಾತ್ಮಕ ಚಟುವಟಿಕೆಗಳೆಡೆಗೆ ಸೆಳೆದರು.
ಬಿಂಕದಕಟ್ಟಿ ಝೂಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಅವರಲ್ಲಿ ನೀವೂ ಒಬ್ಬರಾಗದೇ, ಈ ಜನರಿಗೆ ನಾನು ಏನು ಪೂರೈಸಲಿ? ಏನನ್ನು ನೀಡಲಿ? ಎಂಬ ವಿಚಾರ ಸದಾ ನಿಮ್ಮಲ್ಲಿ ಜಾಗೃತವಾದಾಗ ಮಾತ್ರ ನೀವು ಮುಂದೆ ಉತ್ತಮ ಉದ್ಯಮಿಯಾಗಲು ಸಾಧ್ಯ ಎಂದು ಕಿವಿ ಮಾತು ಹೇಳಿದರು. ಕಾರ್ಯದಲ್ಲಿ ಸ್ಪಷ್ಠತೆ, ಕೌಶಲ್ಯದಲ್ಲಿ ವಿಶಿಷ್ಠತೆ, ಗುರಿಯಲ್ಲಿ ಜೇಷ್ಠತೆ, ಇವು ನಿತ್ಯ ನಿಮ್ಮ ಸ್ಮರಣೆಯಲ್ಲಿ ಇರಲೇಬೇಕು ಎಂದರು. ವಿದ್ಯಾರ್ಥಿಗಳೊಂದಿಗೆ ಸಂವಹನಾ ಕಾರ್ಯಕ್ರಮವೂ ಜರುಗಿತು. ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರ ನೀಡುತ್ತಾ ಅವರ ಮನ ತಣಿಸಿದರು. ವಿದ್ಯಾರ್ಥಿಗಳು ಮಹಾವಿದ್ಯಾಲಯದ ಉಪನ್ಯಾಸಕರೊಂದಿಗೆ, ನಿರ್ದೇಶಕರುಗಳೊಂದಿಗೆ ಝೂ ವೀಕ್ಷಣೆ ಜೊತೆಗೆ ವನ ಭೋಜನ ಸವಿದರು.
‘ಪರಿಸರ ವೀಕ್ಷಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರೇರೇಪಣಾ ಮಾತು’ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರೋ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಶ್ರೀ.ಎಂ.ಸಿ.ಹಿರೇಮಠ, ನಿರ್ದೇಶಕರುಗಳಾದ ಪ್ರೋ.ರೋಹಿತ್ ಒಡೆಯರ್, ಪ್ರೋ.ರಾಹುಲ ಒಡೆಯರ್, ಪ್ರೋ. ಸೈಯ್ಯದ್ ಮತೀನ್ ಮುಲ್ಲಾ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕರು ಪ್ರೋ. ಹೇಮಂತ ದಳವಾಯಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಪ್ರೋ.ಎಸ್.ಎಸ್. ವಜ್ರಬಂಡಿಯವರು ಸರ್ವರನ್ನು ಸ್ವಾಗತಿಸಿದರೆ, ಪ್ರೋ. ಸಂಗೀತಾ ಬೀಳಗಿ ವಂದಿಸಿದರು.