ಮುಂಡರಗಿ: ಇಂದು ಎಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ನದಿ ದಡದಲ್ಲಿರುವ ದೇವಸ್ಥಾನ ಸೇರಿದಂತೆ ವಿವಿಧ ತೀರ್ಥ ಕ್ಷೇತ್ರ, ಹಾಗೂ ಧಾರ್ಮಿಕ ಸ್ಥಳಗಳಲ್ಲಿ ನಾಡಿನ ಜನತೆ ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ ಸಂಕ್ರಾಂತಿ ಆಚರಣೆ ಮಾಡಿದರು.
ಗದಗ ಜಿಲ್ಲೆ ಮುಂಡರಗಿ ಹಾಗೂ ಇನ್ನಿತರ ತಾಲೂಕಿನ ವಿವಿಧ ತೀರ್ಥ ಕ್ಷೇತ್ರದ ದೇವಾಲಯಗಳಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಮಂಗಳವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮುಂಡರಗಿ ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ, ಹಡಗಲಿ ತಾಲೂಕಿನ ಮದಲಗಟ್ಟಿ ಆಂಜನೇಯ ದೇವಸ್ಥಾನ, ಹಮ್ಮಿಗಿ ಗ್ರಾಮದ ತುಂಗಭದ್ರಾ ಡ್ಯಾಂ, ಗೋಣಬಸವೇಶ್ವರ ದೇವಸ್ಥಾನ, ಶಿರಹಟ್ಟಿ ತಾ.ಸಾಸರವಾಡದ ಗಡ್ಡಿಬಸವೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಮುಕ್ತಿಮಂದಿರ ಕ್ಷೇತ್ರ, ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕುಟುಂಬ ಸಮೇತ ಆಗಮಿಸಿದ್ದ ಸಾವಿರಾರು ಭಕ್ತರು ನದಿಗಳಲ್ಲಿ ಮಿಂದೆದ್ದು, ಒಬ್ಬರಿಗೊಬ್ಬರು ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು.

ಶಿಂಗಟಾಲೂರಿನ ಶ್ರೀ ವಿರಭದ್ರೇಶ್ವರ ದೇವಾಸ್ಥಾನದಲ್ಲಂತೂ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ವಿರಭದ್ರೇಶ್ವರ ದೇವರ ದರ್ಶನ ಪಡೆದರು.
ತಾವು ತಯಾರಿಸಿಕೊಂಡು ಬಂದಿದ್ದ, ಎಳ್ಳು ಹೋಳಿಗೆ, ಚಪಾತಿ ರೊಟ್ಟಿ, ಮಡಕಿ ಕಾಳು,ಎಣ್ಣೆಗಾಯಿ ಪಲ್ಯ, ಚಿತ್ರಾನ್ನ, ವಿವಿಧ ಬಗೆಯ ಆಹಾರ ಖಾದ್ಯಗಳನ್ನ ಸವಿದರು.ದೇವಸ್ಥಾನದ ಕಮೀಟಿ ವತಿಯಿಂದ ಬಂದ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಂತರ ಕುಟುಂಬ ಸಮೇತ ಆಗಮಿಸಿದ್ದ ಸದಸ್ಯರು ನದಿಗಳಲ್ಲಿ ಸ್ನಾನ ಮಾಡಿ, ದೇವರ ದರ್ಶನ ಮಾಡಿ, ಪೂಜೆ ಸಲ್ಲಿಸಿ, ತಾವು ತಯಾರಿಸಿಕೊಂಡು ಬಂದಿದ್ದ ವಿವಿಧ ಬಗೆಯ ಖಾದ್ಯಗಳನ್ನ ಕೂಡು ಕುಟುಂಬದ ಎಲ್ಲ ಸದಸ್ಯರು ಒಂದೆಡೆ ಕುಳಿತು ಊಟ ಮಾಡಿದರು.
ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬವನ್ನ ನಾಡಿನ ಜನತೆ ಅತ್ಯಂತ ಸಂಭ್ರಮದಿಂದ ಆಚರಿಸಿದರು.