ಲಕ್ಷ್ಮೇಶ್ವರ: ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿರುವ ಲಕ್ಷ್ಮೇಶ್ವರ ತಾಲೂಕಿನ ಸಾಹಿತ್ಯ ಭವನದ ನಿರ್ಮಾಣ ಕಾರ್ಯವನ್ನು ಜನಪ್ರತಿನಿಧಿಗಳ ಹಾಗೂ ದಾನಿಗಳ ಸಹಾಯದಿಂದ ಪೂರ್ಣಗೊಳಿಸಲು ಪ್ರಯತ್ನವನ್ನು ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಕಟ್ಟಡದಲ್ಲಿ ಹಾಗೂ ಕಟ್ಟಡದ ಸುತ್ತಮುತ್ತ ಬೆಳೆದಿದ್ದ ಸಾಕಷ್ಟು ಗಿಡಗಂಟಿಗಳನ್ನು ಪುರಸಭೆಯ ಸಹಕಾರದೊಂದಿಗೆ ಈಶ್ವರನಗರ ವಾರ್ಡ್ ನ ಪುರಸಭಾ ಸದಸ್ಯರಾದ ಪ್ರವೀಣ ಬಾಳಿಕಾಯಿಯವರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಈಶ್ವರ ನಗರದ ನಿವಾಸಿಗಳು ಎಲ್ಲರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಲಕ್ಷ್ಮೇಶ್ವರ ಸುದ್ದಿ:ಪರಮೇಶ ಎಸ್ ಲಮಾಣಿ.
ಈ ಕುರಿತು ಲಕ್ಷ್ಮೇಶ್ವರ ತಾಲೂಕಿನ ಮಾಧ್ಯಮ ಬಂಧುಗಳು ಸಾಕಷ್ಟು ಬಾರಿ ಪ್ರೇರಣಾದಾಯಕ ಸುದ್ದಿ ಪ್ರಕಟಿಸುವುದರ ಮೂಲಕ ಬೆಂಬಲವಾಗಿ ನಿಂತದ್ದನ್ನು ಇಲ್ಲಿ ಸ್ಮರಿಸಬಹುದು. ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿರುವ ಪುಲಿಗೆರೆ ಅಂದರೆ ಲಕ್ಷ್ಮೇಶ್ವರಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸಾಹಿತ್ಯ ಭವನ ತೀರ ಅವಶ್ಯಕವಾಗಿ ಬೇಕು ಎಂಬುದು ಎಲ್ಲ ಸಾಹಿತ್ಯಭಿಮಾನಿಗಳ ಬಹಳ ದಿನದ ಬೇಡಿಕೆಯಾಗಿದೆ. ಆದ್ದರಿಂದ ಲಕ್ಷ್ಮೇಶ್ವರದ ಮಾಜಿ ಶಾಸಕರು, ಶಾಸಕರು, ಊರಿನ ಹಿರಿಯರು, ಪುರಸಭೆಯ ಅಧ್ಯಕ್ಷರು-ಸದಸ್ಯರು, ಸಾಹಿತ್ಯ ಅಭಿಮಾನಿಗಳು ಎಲ್ಲರ ಮಾರ್ಗದರ್ಶನ,ಸಹಾಯ-ಸಹಕಾರದೊಂದಿಗೆ ಸಾಹಿತ್ಯ ಭವನದ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಬೇಕು ಎಂಬುದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಈಶ್ವರ ನಗರದ ನಿವಾಸಿಗಳು ಅಭಿಪ್ರಾಯವಾಗಿದೆ.
ಇಂದಿನ ಸ್ವಚ್ಛತಾ ಕಾರ್ಯದಲ್ಲಿ ವಾರ್ಡ್ ನ ಪುರಸಭಾ ಸದಸ್ಯ ಪ್ರವೀಣ ಬಾಳಿಕಾಯಿ, ಪುರಸಭಾ ಮಾಜಿ ಉಪಾಧ್ಯಕ್ಷರು ಹಾಗೂ ಅಭಿಯಂತರರಾದ ಮಹೇಶ ಸೋಮಕ್ಕನವರ, ವಿಶ್ರಾಂತ ಉಪನ್ಯಾಸಕ ಎಸ್.ಎನ್. ಮಳಲಿ, ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ, ಸಲಹಾ ಸಮಿತಿಯ ಈರಣ್ಣ ಗಾಣಿಗೇರ, ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ,ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ, ಎಸ್.ಬಿ.ಅಣ್ಣಿಗೇರಿ,ಪಿ.ಎಚ್. ಕೊಂಡಾಬಿಂಗಿ,ವಿಶ್ರಾಂತ ಉಪನ್ಯಾಸಕರಾದ ಎ.ಎನ್.ನಾವಿ, ಎನ್.ಬಿ.ತಳ್ಳಳ್ಳಿ, ಗಿರೀಶ ಸಜ್ಜನ, ನಿವೃತ್ತ ಸಿಡಿಪಿಓ ಸರಸ್ವತಿ ಹೊನ್ನೇಗೌಡರ,ಪುರಸಭಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ ಕಳ್ಳಿಮನಿ,ಉಪನ್ಯಾಸಕ ಕೋರಿ, ರಾಜು ಅರಳಿ,ರವೀಂದ್ರ ಚವ್ಹಾಣ,ಐ.ಎ.ಬಳಿಗಾರ, ವಿನಯ ಅಂಗಡಿ ಮುಂತಾದವರು ಪಾಲ್ಗೊಂಡಿದ್ದರು.