ಬೆಂಗಳೂರು: ಆರ್ ಟಿ ಐ ಕಾರ್ಯಕರ್ತರೊಬ್ಬರು ರಾಜ್ಯದ 14 ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ 9,646 ಅರ್ಜಿಗಳನ್ನ ರಾಜ್ಯ ಮಾಹಿತಿ ಹಕ್ಕು ಆಯೋಗ ವಜಾ ಮಾಡಿದೆ. ಅಲ್ಲದೇ ಆಯೋಗದ ಕ್ರಮವನ್ನ ಹೈಕೋರ್ಟ್ ನ್ಯಾಯಪೀಠ ಎತ್ತಿಹಿಡಿದಿದೆ.
ಹುಬ್ಬಳ್ಳಿಯ *ದಾವಲ್ಸಾಬ್ ಎಂ. ಮಿಯಾನ್ನವರ್* ಅನ್ನೋ
ಆರ್ ಟಿ ಐ ಕಾರ್ಯಕರ್ತರೊಬ್ಬರು ಅನಾವಶ್ಯಕ ಮತ್ತು ದುರುದ್ದೇಶಪೂರಿತ ವಿವರಣೆ ಕೇಳಿ 14 ಇಲಾಖೆಗಳಿಗೆ 9,646 ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿದಾರರ ಈ ನಡೆಯಿಂದಾಗಿ ಆರ್ಟಿಐ ಕಾಯ್ದೆ ಸ್ಪಷ್ಟ ದುರುಪಯೋಗವಾಗುತ್ತಿದೆ. ಈ ರೀತಿಯ ಪ್ರವೃತ್ತಿ ಸದುದ್ದೇಶದಿಂದ ಮಾಹಿತಿ ಕೇಳುವವವರ ಅರ್ಜಿಗಳ ವಿಲೇವಾರಿಗೆ ವಿಳಂಬವಾಗುತ್ತಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ಸೆ. 25, 2024 ರಂದೇ ಈ ಆದೇಶ ನೀಡಿದ್ದು, ಅರ್ಜಿದಾರರಿಗೆ ಬರೊಬ್ಬರಿ 9,64,600 ರೂ.ದಂಡ ಪಾವತಿಸುವಂತೆ ಆದೇಶಿಸಿದೆ.
ಅರ್ಜಿದಾರರು ಆರ್ಟಿಐ ಕಾಯ್ದೆಯ ನಿಯಮಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟ. ಯಾವುದೇ ನ್ಯಾಯಸಮ್ಮತ ಕಾರಣಗಳಿಲ್ಲದೆ ಸಾವಿರಾರು ಅರ್ಜಿಗಳನ್ನು ವಿವಿಧ ಇಲಾಖೆಗಳಲ್ಲಿ ಸಲ್ಲಿಸಿರುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದಿದೆ.
ಅಲ್ಲದೇ, ನ್ಯಾಯಾಲಯದ ವಿಧಿಸಿದ್ದ ದಂಡದ ಶುಲ್ಕವನ್ನು ದಾವಲಸಾಬ್, ಪಾವತಿ ಮಾಡದೇ, ಅರ್ಜಿಗಳನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿದ್ದನು. ಆದರೆ ಅದನ್ನು ಒಪ್ಪಿಕೊಳ್ಳದ ನ್ಯಾಯಾಲಯ,ಇದೆಲ್ಲ ಸಾಧ್ಯವಿಲ್ಲ. ಇದು ಅಪಾಯಕಾರಿ ನಡೆಯ ಪೂರ್ವ ನಿದರ್ಶನವಾಗುವುದರ ಜೊತೆಗೆ ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗಕ್ಕೆ ಸಹಕರಿಸಿದಂತಾಗಲಿದೆ.
ಸದುದ್ದೇಶದದ ಆರ್ ಟಿ ಐ ಹಾಕುವ ಅರ್ಜಿಗಳ ವಿಲೇವಾರಿಗೆ ವಿಳಂಬವಾಗುತ್ತದೆ. ಆದ್ದರಿಂದ ಅರ್ಜಿದಾರರಿಂದ ಬಾಕಿಯಿರುವ ಕೋರ್ಟ್ ಶುಲ್ಕ 9,64,600 ರೂ.ಗಳ ಪಾವತಿಗೆ ನ್ಯಾಯಾಲಯದ ರಿಜಿಸ್ಟ್ರಾರ್ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ.