ಗದಗ ಜಿಲ್ಲೆ, ಅಕ್ಟೋಬರ್ 4:ಲಕ್ಷ್ಮೇಶ್ವರ ತಾಲೂಕಿನ ಒಡೆಯರಮಲ್ಲಾಪುರ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಘಟನೆಯೊಂದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಸತಿ ಶಾಲೆಗೆ ಭೇಟಿ ನೀಡಿದ ಖಾಸಗಿ ವ್ಯಕ್ತಿಗೆ ರಾಜಾತಿಥ್ಯದಂತೆ ಸ್ವಾಗತ ನೀಡಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಶಿಕ್ಷಣ ವಲಯದ ಒಳಗೆ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ವಿಜಯನಗರ ಜಿಲ್ಲೆಯ ಎಎಂಪಿ ವಾಗೀಶ್ ಎನ್ನುವ ಖಾಸಗಿ ವ್ಯಕ್ತಿ ‘ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ’ ಎಂದು ಹೇಳಿಕೊಂಡು ಶಾಲೆಗೆ ಭೇಟಿ ನೀಡಿದ್ದರು. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಹಾಗೂ ಸಿಬ್ಬಂದಿ ಅವರು, ಈ ವ್ಯಕ್ತಿಗೆ ರಾಜ ವೈಭೋಗದ ಸ್ವಾಗತ ನೀಡುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿದರೆಂಬ ಆರೋಪ ಕೇಳಿ ಬಂದಿದೆ.
ಶಾಲಾ ಆವರಣದೊಳಗೆ ವಿದ್ಯಾರ್ಥಿಗಳ ಕೈಯಿಂದ ಪುಷ್ಪವೃಷ್ಟಿ ಮಾಡಿಸಿ, ರಸ್ತೆಯುದ್ದಕ್ಕೂ ಪುಷ್ಪ ಸುರಿದು ಸ್ವಾಗತ ನೀಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದರಿಂದ, ಶಾಲಾ ವಿದ್ಯಾರ್ಥಿಗಳನ್ನು ಸೇವಕರಂತೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅದರಲ್ಲಿ ಮಕ್ಕಳಿಂದ ಬೋರ್ಡ್ ಹಿಡಿದು “ಸ್ವಾಗತ ಕೋರಿ” ಶ್ಲಾಘನೀಯ ಶೈಲಿಯ ಪ್ರಚಾರ ಮಾಡಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ.
ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸಬೇಕಾದ ವಿದ್ಯಾಸಂಸ್ಥೆಯೇ, ಜನಪ್ರತಿನಿಧಿಯೂ ಅಲ್ಲದ ಖಾಸಗಿ ವ್ಯಕ್ತಿಗೆ ರಾಜಾತಿಥ್ಯ ನೀಡಿರುವುದು ಅತಿರೇಕದ ನಡೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಕುರಿತು ಹಾವೇರಿಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹುಬ್ಬಳ್ಳಿ ಅವರು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ದೂರು ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ಗಂಗಪ್ಪ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಅವರಿಗೆ ನೋಟಿಸ್ ನೀಡಿರುವುದು ತಿಳಿದುಬಂದಿದೆ.
ಎಸಿ ಅವರು ನೋಟಿಸ್ನಲ್ಲಿ,
ಸ್ವಾಗತಕ್ಕಾಗಿ ಬೋರ್ಡ್ ಹಾಕಿದ್ದಕ್ಕೆ, ವಿದ್ಯಾರ್ಥಿಗಳಿಂದ ಪುಷ್ಪವೃಷ್ಟಿ ಮಾಡಿಸಿದ್ದಕ್ಕೆ
ಕಾರಣ ಕೇಳಲಾಗಿದೆ. ಮೂಲಗಳಿಂದ ತಿಳಿದುಬಂದಂತೆ, ಮುಖ್ಯ ಶಿಕ್ಷಕರ ಉತ್ತರ ಸಮಂಜಸವಾಗಿಲ್ಲವೆಂದು ಕಂಡು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ.
ಇದೇ ಸಂದರ್ಭದಲ್ಲಿ, ಆ ವ್ಯಕ್ತಿ ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ಕಚೇರಿ ಹಾಗೂ ವಸತಿ ಶಾಲೆಗಳಿಗೆ ಭೇಟಿ ನೀಡಿದ್ದರೆಂಬ ಮಾಹಿತಿ ಹೊರಬಂದಿದೆ.
ಈ ಘಟನೆ ಮೂಲಕ, “ವಿದ್ಯಾರ್ಥಿಗಳ ಗೌರವ, ಸರ್ಕಾರಿ ಶಾಲೆಗಳ ಪ್ರಾಮಾಣಿಕತೆ ಎಷ್ಟರ ಮಟ್ಟಿಗೆ ಉಳಿದಿದೆ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.