ಗದಗ: ಹೌದು,2025 ರ ಜ.8 ರಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನ ಬರ್ತಿದೆ. ವಿಪರ್ಯಾಸ ಎನ್ನುವಂತೆ, 2024 ರಲ್ಲಿ ಯಶ್ ಜನ್ಮದಿನ ಕರಾಳ ದಿನವಾಗಿ ಬದಲಾಗಿತ್ತು. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಭಾವಚಿತ್ರವಿರುವ ಬ್ಯಾನರ್ ಕಟ್ಟಲು ಹೋಗಿ ಮೂವರು ಅಭಿಮಾನಿಗಳು ವಿದ್ಯುತ್ ಶಾಕ್‌ನಿಂದಾಗಿ ಸಾವನ್ನಪ್ಪಿದ್ದರು.ಅದೇ ದಿನ ಸೂರಣಗಿ ಗ್ರಾಮಕ್ಕೆ ನಟ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.
ಆ ದುರ್ಘಟನೆ ಮತ್ತೆಂದೂ ಮರುಕಳಿಸಬಾರದು ಅಥವಾ ಅಭಿಮಾನಿವರ್ಗಕ್ಕೆ ಮುನ್ನೆಚ್ಚರಿಕೆಯ ಬುದ್ದಿಮಾತೋ ಗೊತ್ತಿಲ್ಲ? ಈ ಬಾರಿ ಹತ್ತು ದಿನ ಮುಂಚಿತವಾಗಿಯೇ ಯಶ್ ತಮ್ಮ ಬರ್ತಡೇ ದಿನದ ಕುರಿತು ಅಭಿಮಾನಿಗಳಿಗೆ ಪತ್ರದ ಮುಖೇನ ಸಂದೇಶವನ್ನ ಹರಿಬಿಟ್ಟಿದ್ದಾರೆ.
“ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ.
ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ.ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ.”
“ಹಾಗಾಗಿ ಪ್ಲೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ.”
ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ.
ನಿಮ್ಮ ಪ್ರೀತಿಯ
ಯಶ್…
ಹೀಗೆ ತಮ್ಮ X ಖಾತೆಯಲ್ಲಿ ಪತ್ರದ ಮುಖೇನ ನಟ ಯಶ್ ಅಭಿಮಾನಿಗಳಿಗೆ ಮುನ್ನೆಚ್ಚರಿಕೆಯ ಕುರಿತು ಸಂದೇಶ ನೀಡಿದ್ದಾರೆ.