ಗದಗ: ನೀವು ವಾಹನ ಚಲಾಯಿಸುವಾಗ ನಿಮಗಾಗಿ ನಿಮ್ಮ ಕುಟುಂಬಸ್ಥರು ಕಾಯುತ್ತಿರುತ್ತಾರೆ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಿ ಎಂದು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ, ವಿಶಾಲ ಜಿ. ಪಿ. ಅವರು ಹೇಳಿದರು.
ಗದಗನ ಚಿಕ್ಕಟ್ಟಿ ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈವರೆಗೆ ಆಗಿರುವ ಅಪಘಾತಗಳು ವಾಹನಗಳನ್ನು ಅತಿಯಾದ ವೇಗದಿಂದ ಚಾಲಾಯಿಸಿರುವುದೇ ಮುಖ್ಯ ಕಾರಣ ಎಂದು ತಿಳಿದುಬಂದಿದ್ದು, ಹಾಗಾಗಿ ಒಂದು ಮಿತಿಯಲ್ಲಿ ವಾಹನವನ್ನು ಚಲಾಯಿಸಿ ‘ನಿಧಾನವೇ ಪ್ರಧಾನ’ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಿ. ತಡವಾಯಿತೆಂದು ವೇಗವಾಗಿ ಹೋಗುವುದಕ್ಕಿಂತ ಬಿಡುವ ಸಮಯವನ್ನು ಒಂದು ಗಂಟೆ ಮುಂಚಿತವಾಗಿಯೇ ಹೊರಟರೆ ಆಗ ಅಪಘಾತದಿಂದ ಮುಕ್ತರಾಗಿ ತಾವು ಸೇರುವ ಸ್ಥಳವನ್ನು ಸುರಕ್ಷಿತವಾಗಿ ತಲುಪುವಿರಿ ಎಂದು ತಿಳಿ ಹೇಳಿದರು.

ರಸ್ತೆ ಅಪಘಾತಕ್ಕೆ ಪ್ರಮುಖವಾದ ಮೂರು ಕಾರಣಗಳಿವೆ. ಒಂದು ಚಾಲಕನ ತಪ್ಪಿನಿಂದಾಗಿ, ಮತ್ತೊಂದು ವಾಹನ ಸರಿ ಇಲ್ಲದಿರುವುದು, ಮಗದೊಂದು ರಸ್ತೆ ಸರಿ ಇಲ್ಲದಿರುವುದರಿಂದ ರಸ್ತೆ ಅಪಘಾತಗಳಾಗುತ್ತವೆ. ಹಳ್ಳಿಯ ರಸ್ತೆಗಳನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಗಮನಿಸಿದಾಗ ಅತ್ಯುತ್ತಮವಾಗಿವೆ. ಹಾಗಾದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ಹೆಚ್ಚು ಅಪಘಾತಗಳಾಗಿವೆ. ರಸ್ತೆ ಚೆನ್ನಾಗಿದ್ದರೂ ಅಪಘಾತಗಳಾಗುವುದಕ್ಕೆ ಅತಿ ವೇಗವೇ ಕಾರಣ. ಇನ್ನು ಎರಡನೆಯದಾಗಿ ರಸ್ತೆ ಚೆನ್ನಾಗಿದ್ದು ವಾಹನ ಅತಿಯಾದ ವೇಗವಿಲ್ಲ ಆಗಲೂ ಅಪಘಾತಗಳಾಗಿವೆ. ಅದಕ್ಕೆ ಕಾರಣ, ವಾಹನ ಚಾಲಕನ ಅಜಾಗರೂಕತೆಯಿಂದ, ವಾಹನ ಚಲಾಯಿಸಿರುವುದರಿಂದ ಅವರು ಹಗಲು ರಾತ್ರಿ ನಿದ್ದೆಗೆಟ್ಟು ವಿಶ್ರಾಂತಿ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಮೊಬೈಲನಲ್ಲಿ ಮಾತನಾಡುತ್ತ ಇಲ್ಲವೇ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸಿದಾಗ ಅಪಘಾತಗಳಾಗುತ್ತವೆ. ಹಾಗಾಗಿ ಮೈಯೆಲ್ಲ ಕಣ್ಣಾಗಿ ಅತಿ ಜಾಗ್ರತೆಯಿಂದ ವಾಹನ ಚಲಾಯಿಸಬೇಕು.

ರಸ್ತೆ ಅಪಘಾತಗಳಲ್ಲಿ ಯಾವ ವಯಸ್ಸಿನವರು ಅತಿ ಹೆಚ್ಚು ಎನ್ನುವ ವರದಿ ಗಮನಿಸಿದಾಗ 18 ರಿಂದ 25 ನೇ ವಯಸ್ಸಿನವರಲ್ಲಿಯೆ ಹೆಚ್ಚು ರಸ್ತೆ ಅಪಘಾತಗಳಾಗಿರುವುದು ಕಂಡುಬಂದಿದೆ. ಆ ವಯಸ್ಸಿನವರಲ್ಲಿ ಜಾಗೃತಿ ಕಡಿಮೆ ಇರುತ್ತದೆ. ದ್ವೀಚಕ್ರ ವಾಹನ ಸವಾರರು ಮಾಡುವ ಮೊದಲ ತಪ್ಪು ಹೆಲ್ಮೆಟ್ ಹಾಕದೇ ಬೈಕ್ ಓಡಿಸುವುದು. ಎರಡನೆಯದಾಗಿ ಹೆಲ್ಮೆಟ್ ಇದ್ದೂ ತಲೆಗೆ ಹಾಕಿಕೊಳ್ಳದೆ ಬೈಕನ ಕನ್ನಡಿಗೆ ಹಾಕಿ ತಮ್ಮ ಹೇರ್ ಸ್ಟೈಲ್ ಹಾಳಾಗುತ್ತದೆ ಅಂತ ಬೈಕ್ ಓಡಿಸುತ್ತಾರೆ. ಹೇರ್ ಸ್ಟೈಲ್‌ಗಿಂತ ಜೀವ ಮುಖ್ಯ ಎನ್ನುವದನ್ನು ಅರಿತುಕೊಂಡು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ಓಡಿಸಬೇಕು. ಹೆಲ್ಮೆಟ್ ಹಾಕುವುದು ಪೋಲೀಸರಿಗಾಗಿ ಅಲ್ಲ, ಅದು ನಮ್ಮ ಪ್ರಾಣ ರಕ್ಷಣೆಗಾಗಿ ಎಂಬುದನ್ನು ನಾವು ಮೊದಲು ತಿಳಿಯೊಣ.
ಕಾರುಗಳನ್ನು ಚಲಾಯಿಸುವಾಗ ಡ್ರೈವರ್ ಜೊತೆಗೆ ಎಲ್ಲ ಸಹ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಪ್ರ‍್ರಯಾಣ ಮಾಡಲು ಬೈಕ್ ಕಾರ್‌ಗಳಿಗಿಂತ ಸಾಧ್ಯವಾದಷ್ಟು ಬಸ್ಸುಗಳಲ್ಲಿ ಪ್ರಾಯಾಣಿಸುವುದು ಸುರಕ್ಷಿತ, ಅದು ಸುರಕ್ಷತೆಯ ದೃಷ್ಟಿಯಿಂದಷ್ಟೇ ಅಲ್ಲದೇ ವಾಯುಮಾಲಿನ್ಯವನ್ನು ಕಡಿಮೆಮಾಡಿದಂತಾಗುತ್ತದೆ. ವಾಹನಗಳನ್ನು ಚಲಾಯಿಸುವಾಗ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಲೇಬೇಕು. ಪಾದಚಾರಿಗಳೂ ಸಹ ರಸ್ತೆಯ ಮೇಲೆ ಚಲಿಸುವಾಗ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತ್ತ ರಸ್ತೆ ದಾಟಬೇಕು. ರಸ್ತೆ ನಿಯಮಗಳು ಕೇವಲ ವಾಹನ ಚಾಲಕರು ಪಾಲಿಸುವುದಷ್ಟೇ ಅಲ್ಲದೇ ಪಾದಚಾರಿಗಳೂ ಸಹ ಪಾಲಿಸಿದಾಗ ಮಾತ್ರ ಅಪಘಾತಗಳಿಂದ ಮುಕ್ತರಾಗಬಹುದು. ವಾಹನ ಚಲಾಯಿಸುವಾಗ ಮೊಬೈಲ್ ಕರೆ ಬಂದರೆ ಕರೆಯನ್ನು ಸ್ವೀಕರಿಸಬೇಡಿ ಒಂದು ವೇಳೆ ಅದು ಬಹುಮುಖ್ಯವಾದ ಕರೆಯಾಗಿದ್ದರೆ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ಮಾತನಾಡಬೇಕು, ವಾಹನ ಓಡಿಸುತ್ತಲೆ ಮಾತನಾಡಬಾರದು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡುತ್ತ ಇಂತಹ ಈ ರಸ್ತೆ ನಿಯಮಗಳನ್ನು ನಾವಷ್ಟೇ ಪಾಲಿಸುವುದಲ್ಲ, ನೀವು ನಿಮ್ಮ ಮನೆಗೆ ಹೋದ ತಕ್ಷಣ ನಿಮ್ಮ ಪಾಲಕರಿಗೆ ತಿಳಿಸಿಹೇಳಿರಿ. ನಿಮಗಷ್ಟೇ ಅಲ್ಲ, ನನಗೂ ಸಹ ಈ ಎಲ್ಲ ನಿಯಮಗಳನ್ನು ನಾನು ಪಾಲಿಸಲೆಬೇಕು ಎಂಬ ನಿರ್ಧಾರ ಮಾಡಿರುವೆ. ರಸ್ತೆ ನಿಯಮದ ಪ್ರತಿಯೊಂದು ಮಾಹಿತಿಯನ್ನು ನೀಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ವಿಶಾಲ ಜಿ. ಪಿ.ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ರಸ್ತೆ ನಿಯಮಗಳ ಕುರಿತು ಸಮಗ್ರ ಮಾಹಿತಿ ನೀಡಿದ ಶ್ರೀ ವಿಶಾಲ ಜಿ. ಪಿ. ಅವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಇದೇ ವೇಳೆ ರಸ್ತೆ ಜಾಗೃತಿ ಕುರಿತ ಬಿತ್ತಿಪತ್ರಗಳನ್ನ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಇಲಾಖೆಯ ಸಿಬ್ಬಂದಿಯವರಾದ ಪ್ರವೀಣ ಕುಲಕರ್ಣಿ, ರಾಜಶೇಖರ ಗೌಡರ್, ಬಿಪಿನ್ ಚಿಕ್ಕಟ್ಟಿ ಬಿ.ಸಿ.ಎ. ಕಾಲೇಜಿನ ಪ್ರಾಂಶುಪಾಲರಾದ ಬಿಪಿನ್ ಎಸ್. ಚಿಕ್ಕಟ್ಟಿಯವರು, ಉಪ ಪ್ರಾಚಾರ್ಯರಾದ ಶೋಭಾ ಸ್ಥಾವರಮಠ, ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ, ಹಿರಿಯ ಉಪನ್ಯಾಸಕರಾದ ಅನಿಲ ನಾಯಕ್ ಮತ್ತು ಮುಖ್ಯೋಪಾಧ್ಯಾಯನಿಯರಾದ ರೀಯಾನ ಮುಲ್ಲಾ ಉಪಸ್ಥಿತರಿದ್ದರು.