ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನ ಬೂದಿಹಾಳ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 6 ಲಕ್ಷ ಮೌಲ್ಯದ 182 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ನರಗುಂದ ಪಟ್ಟಣದಿಂದ ಬೆಳಗಾವಿ ಜಿಲ್ಲೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಾನೂನುಬಾಹಿರವಾಗಿ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ, ಆಹಾರ ಇಲಾಖೆ ಮತ್ತು ಪೊಲೀಸರಿಂದ ಜಂಟಿ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ ಅಕ್ಕಿ ಪತ್ತೆ ಹಚ್ಚಲಾಗಿದೆ.
ಈ ಸಂಬಂಧ ಕ್ಯಾಂಟರ್ ವಾಹನದ ಮಾಲೀಕ ಹಾಗೂ ಚಾಲಕನಾಗಿರುವ ನಿರಂಜನಯ್ಯ ನಂದಾಪುರ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಸಾಗಾಟದ ಹಿಂದಿನ ಜಾಲವನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆದಿದೆ.

ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಪಡಿತರ ಅಕ್ಕಿ ಸಾಗಾಟವನ್ನು ತಡೆಯಲು ಪೊಲೀಸರು ಮತ್ತು ಆಹಾರ ಇಲಾಖೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.