ಗದಗ : ಜ್ಞಾನಾರ್ಜನೆಯಲ್ಲಿ ಶ್ರದ್ಧೆ, ವಿಶ್ವಾಸ, ಸಾಧಿಸಬೇಕೆನ್ನುವ ಛಲ ಇದ್ದಾಗ ಸಾಧನೆ ಸುಲಭ ಸಾಧ್ಯ ಎಂದು ಪ್ರೋ.ರೋಹಿತ್ ಒಡೆಯರ್ ಅಭಿಪ್ರಾಯ ಪಟ್ಟರು.
ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸ್ವಾಗತಿಸುವ ‘ಪುನಶ್ಚೇತನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಪ್ರೋ.ರೋಹಿತ್ ಒಡೆಯರ್ ಸಂಸ್ಥೆ, ಕಾಲೇಜು ಬೆಳೆದು ಬಂದ ಹೆಜ್ಜೆ ಗುರುತುಗಳನ್ನು, ಇಲ್ಲಿಯ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ತಿಳಿಸುತ್ತಾ ನೀವೂ ಕೂಡಾ ಆ ಸಾಧನಾ ಮಾರ್ಗದಲ್ಲಿ ಮುಂದುವರೆಯಲು ‘ಸನ್ಮಾರ್ಗ’ಕಾಲೇಜಿನ ಸಮಸ್ತ ಸಿಬ್ಬಂದಿಯ ಸಹಾಯ, ಸಹಕಾರ ಇರುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೋ.ರಾಜೇಶ ಕುಲಕರ್ಣಿಯವರು ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಮತ್ತು ಕಾಲೇಜು ಸದಾ ಸನ್ನದ್ಧವಾಗಿದೆ, ಕಾರಣ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಯಶಸ್ಸಿನ ಮೆಟ್ಟಿಲನ್ನು ಹತ್ತಲಿ ಎಂದು ಆಶಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಚಾರ್ಯ ಪ್ರೋ. ಪ್ರೇಮಾನಂದ ರೋಣದವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಉತ್ತಮ ನೈತಿಕತೆ ಇರಲಿ ಎಂದರು.
ವೇದಿಕೆಯಲ್ಲಿ ಪ್ರೋ,ಪುನೀತ ದೇಶಪಾಂಡೆ, ಪ್ರೋ.ರಾಹುಲ್ ಒಡೆಯರ್, ಪ್ರೋ.ಸೈಯ್ಯದ ಮತ್ತಿನ್ ಮುಲ್ಲಾ ಹಾಗೂ ಆಡಳಿತಾಧಿಕಾರಿಗಳಾದ ಶ್ರೀ.ಎಂ.ಸಿ. ಹಿರೇಮಠ ಉಪಸ್ಥಿತರಿದ್ದರು. ಕನ್ನಡ ಭಾಷಾ ಹಿರಿಯ ಉಪನ್ಯಾಸಕರಾದ ಪ್ರೋ.ಹೇಮಂತ ದಳವಾಯಿ ಸರ್ವರನ್ನು ಸ್ವಾಗತಿಸಿ, ಕರ‍್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.