ಗದಗ: ನರೇಗಲ್ಲ ಸಮೀಪದ ಕೋಡಿಕೊಪ್ಪ ಗ್ರಾಮದ ನಾಶಿಪುಡಿಯವರ ಓಣಿಯಲ್ಲಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಸಾಕು ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸ್ಥಳೀಯರಾದ ಬಸವರಾಜ ನಾಶಿಪುಡಿಯವರ ಮನೆ ಸಮೀಪದ ಬಾವಿಯಲ್ಲಿ ಬೇಟೆಯಾಡುತ್ತಾ ಬಾವಿ ದಂಡೆ ಮೇಲೆ ಹೋಗಿದ್ದ ಬೇಕ್ಕು ಕಳೆದ 5-6 ದಿನಗಳ ಹಿಂದೆಯೇ ಬಿದ್ದಿತ್ತು. ಬಾವಿಯು ತುಂಬಾ ಆಳವಾಗಿರುವ ಕಾರಣ ಹಾಗೂ ಹಳೇಯ ಬಾವಿಯಾಗಿರುವ ಕಾರಣ ಮೇಲೆ ಬರಲಾಗದೇ ಪರದಾಡುತಿತ್ತು. ರಕ್ಷಣೆ ಮಾಡಲು ಸ್ಥಳೀಯರಿಗೆ ಯಾವುದೇ ರೀತಿಯ ಅವಕಾಶ ಇಲ್ಲದಂತಾಗಿತ್ತು.

ಇದರಿಂದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕ ಮಾಡುವ ಮೂಲಕ, ಅಗ್ನಿಶಾಮಕ ಠಾಣಾಧಿಕಾರಿ ಗ್ಯಾನಪ್ಪ ಹನಮಪ್ಪ ಮಾಗಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣಿಗೆ ನಡೆಸಿ, ಬೆಕ್ಕನ್ನು ಬಾವಿಯಿಂದ ರಕ್ಷಿಸಿ ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದ್ದಿದಾರೆ.
ಗ್ರಾಮದ ನಿವಾಸಿ ಅಭೀಷೆಕ ಹಿರೇವಡೇಯರ ಎಂಬ ಯುವಕ ಅಗ್ನಿ ಶಾಮಕ ದಳದ ಮಾರ್ಗದರ್ಶನದಂತೆ ಹಾಗೂ ಅಗತ್ಯ ರಕ್ಷಾ ಕಚವಗಳನ್ನು ಧರಿಸಿ ಹಗ್ಗದ ಸಹಾಯದಿಂದ ಆಳದ ಬಾವಿಯಲ್ಲಿ ಇಳಿದು, ಚೀಲದ ಮೂಲಕ ಹಿಡಿದು ಮೇಲಕ್ಕೆ ಕಳುಹಿಸಿದ್ದಾರೆ. ಬೆಕ್ಕಿನ ಪ್ರಾಣ ರಕ್ಷಿಸಿದ ಯುವಕನ ಸಾಹಸಕ್ಕೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವೀರಣ್ಣ ಬಿನ್ನಾಳ, ಮಾಂತಯ್ಯ ಗುರುವಡೇಯರ, ಬಸವರಾಜ ನಾಶಿಪುಡಿ, ನಿಂಗಪ್ಪ ಹೊನ್ನಾಪೂರ, ಸಿದ್ದಯ್ಯ ಮಲಕಸಮುದ್ರ ಸೇರಿದಂತೆ ಗ್ರಾಮಸ್ಥರು ಇದ್ದರು.