ಬೆಂಗಳೂರು, ಜೂನ್ 18:
ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶ್ರೀ ತೋಟಪ್ಪ ರಾಜು ಕುರಡಗಿ ಅವರು ಈಗಾಗಲೇ ಮರುನೇಮಕವಾಗಿದ್ದು, ಇಂದು ಬೆಂಗಳೂರು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಂದ ಅಧಿಕೃತ ಆದೇಶಪ್ರತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಚುನಾವಣಾಧಿಕಾರಿ ಕ್ಯಾ. ಗಣೇಶ ಕಾರ್ಣಿಕ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ, ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ರಾಜ್ಯದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ, ಜಿಲ್ಲಾಧ್ಯಕ್ಷ ರಾಜು ಕುರಡಗಿ ಅವರು ಮಾತನಾಡುತ್ತಾ,“ನನ್ನ ಮರುನಿಯಮವನ್ನು ಗೌರವ, ಭರವಸೆ ಹಾಗೂ ಜವಾಬ್ದಾರಿಯೊಂದಿಗೆ ಸ್ವೀಕರಿಸುತ್ತಿದ್ದೇನೆ. ಗದಗ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳಬೇಕಾದ ಅಗತ್ಯವಿದೆ. ಈ ಸಂಕಲ್ಪವನ್ನು ನೆರವೇರಿಸಲು ನರಗುಂದದ ಶಾಸಕ ಸನ್ಮಾನ್ಯ ಸಿ.ಸಿ. ಪಾಟೀಲ, ಕಳಕಪ್ಪ ಜಿ. ಬಂಡಿ, ಶಿರಹಟ್ಟಿಯ ಶಾಸಕ ಡಾ. ಚಂದ್ರು ಲಮಾಣಿ, ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಮಾರ್ಗದರ್ಶನ ಮತ್ತು ಬೆಂಬಲ ನನಗೆ ಶಕ್ತಿಯಾಗಿದೆ.
ಇವರ ಜೊತೆಗೂಡಿ ನಾವು ಹೆಜ್ಜೆ ಹಾಕುತ್ತೇವೆ. ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತನ ನಿಷ್ಠೆ ಹಾಗೂ ಶ್ರಮದಿಂದ ಜಿಲ್ಲೆಯಲ್ಲಿ ಪಕ್ಷದ ಭವಿಷ್ಯವನ್ನು ಮತ್ತಷ್ಟು ಬೆಳಗಿಸುತ್ತೇವೆ,” ಎಂದು ಅಭಿಮತ ವ್ಯಕ್ತಪಡಿಸಿದರು.