ಲಕ್ಷ್ಮೇಶ್ವರ: ‘ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ’ 2024 ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ಪ್ರದಾನವಾಗಿದ್ದು ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದ ಸರಿಗಮಪ ಖ್ಯಾತಿಯ ರಮೇಶ ಲಮಾಣಿ ಹಾಗೂ ಹರಪ್ಪನಹಳ್ಳಿ ತಾಲೂಕಿನ ಡಾ. ಎಲ್.ಪಿ ನಾಯಕ್ ಕಠಾರಿ ಅವರಿಗೆ 2024 ನೇ ವರ್ಷದ ‘ವಾರ್ಷಿಕ ಪ್ರಶಸ್ತಿ’ ಲಭಿಸಿದೆ.
ಮಾರ್ಚ 28 ರಂದು ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ.ಎಲ್.ಪಿ.ನಾಯಕ್ ಕಠಾರಿ
ಬಂಜಾರ ಗಾಯನ, ಕಲೆ, ಸಾಹಿತ್ಯ, ಯುವ ಜನ ಶಿಕ್ಷಣ, ತರಬೇತಿ ಹಾಗೂ ಸಮಾಜ ಸೇವೆಯಲ್ಲಿ ಕಳೆದ 25 ವರ್ಷಗಳಿಂದ ಡಾ.ಎಲ್.ಪಿ.ನಾಯಕ್ ಕಠಾರಿ ತೊಡಗಿದ್ದು. ವಿಶೇಷವಾಗಿ ಬಂಜಾರ ಬಡ ಮಕ್ಕಳಲ್ಲಿ ವ್ಯಕ್ತಿತ್ವ ವಿಕಾಸನ, ವಿವಿಧ ಕಲೆಗಳ ತರಬೇತಿ, ಸಾಹಿತ್ಯ, ಉಡುಗೆ, ತೊಡುಗೆಗಳ ವಿಕಾಸಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ವಲಸೆ ಮಕ್ಕಳಿಗೆ ಹಾಸ್ಟೆಲ್, ಬಡ ಮಕ್ಕಳಿಗೆ ಆಶ್ರಯ, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ.

ಎಲ್.ಪಿ.ಕಠಾರಿ ಅವರು ಒಳತಾಂಡ ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆಯವರು, ಬಿಡಿಎಎಸ್-ಜನಪದದಲ್ಲಿ ಸ್ನಾತಕ ಪದವಿಧರರು ಇವರು ಬಂಜಾರ ಜಾನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಹಾಗೂ ತರಬೇತಿ ನೀಡುತ್ತಾ ಬಂದಿದ್ದಾರೆ.
ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಜನ್ಮಸ್ಥಳದಲ್ಲಿ ಎರಡು ಕಟ್ಟಡಗಳನ್ನು ಕಟ್ಟಿಸಿ ಮಕ್ಕಳ ಶಿಕ್ಷಣಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಗ್ರಂಥಾಲಯ ಸಹ ತೆರೆದಿದ್ದಾರೆ. ಬಡ ಮಕ್ಕಳಿಗೆ, ಮಹಿಳೆಯರಿಗೆ ಬಂಜಾರ ಹಾಡುಗಳನ್ನು ಕಲಿಸುತ್ತಿರುವುದು ಸಹ ಉತ್ತಮವಾದ ಬೆಳವಣಿಗೆಯಾಗಿದೆ. ಇವರು ಬರೆದ ಬಂಜಾರ ಸಾಹಿತ್ಯ ಕೃತಿಗಳು ಪಠ್ಯವಾಗಿವೆ. ಒಟ್ಟಾರೆ ಬಂಜಾರ ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ಉಳಿಸುವ ಜೊತೆಗೆ ಸಂಘಟಿಸುತ್ತಾ ಬಂದಿದ್ದಾರೆ. ಜೊತೆಗೆ ಪರಿಸರ ರಕ್ಷಣೆಯೊಂದಿಗೆ ಯುವಕರಲ್ಲಿ ಪರಿಸರ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸುತ್ತಿದ್ದಾರೆ. ಅನೇಕರಿಗೆ ಬಂಜಾರ ಡಿಪ್ಲೋಮ ಅಭ್ಯಾಸ ಮಾಡಲು ಸಹಾಯ ಹಸ್ತ ಚಾಚಿದ್ದಾರೆ.
ಡಾ. ಎಲ್.ಪಿ.ನಾಯಕ್ ಕಠಾರಿ ಅವರು ‘ಬಂಜಾರ ಗಾಯನ, ಕಲೆ, ಸಾಹಿತ್ಯ, ಯುವ ಜನ ಶಿಕ್ಷಣ, ತರಬೇತಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ’ ಸಲ್ಲಿಸಿದ ಅನುಪಮ ಸೇವೆಯ ಸಾಧನೆಯನ್ನು ಪರಿಗಣಿಸಿ ‘ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ’ ಇವರಿಗೆ 2024ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ನೀಡಿ ಗೌರವಿಸಲಾಗಿದ್ದು ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ರಮೇಶ ಮಂಗ್ಲಪ್ಪ ಲಮಾಣಿ
ರಮೇಶ ಮಂಗಲಪ್ಪ ಲಮಾಣಿ, ಸಂಚಾರಿ ಕುರಿಗಾಹಿಯಾಗಿದ್ದುಕೊಂಡು, ಬಾಲ್ಯದಿಂದಲೇ ಬಂಜಾರಾ ಗೀತೆಗಳನ್ನು ಹಾಡುತ್ತಾ ಬಂದವರು, ಕಳೆದ 25 ವರ್ಷಗಳಿಂದ ಬಂಜಾರ ಗಾಯನ, ಜಾನಪದ ಕಲಾವಿದರಾಗಿ ವಿಶೇಷವಾಗಿ ಬಂಜಾರ ಕಲೆಗೆ ತಮ್ಮ ಪ್ರದರ್ಶನದಿಂದ ಮನ್ನಣೆ ತಂದವರು. ಇವರು ಮಂಗಲಪ್ಪ ಲಮಾಣಿ ಪುತ್ರರಾಗಿ ಗದಗ ಜಿಲ್ಲೆಯ ಮಜ್ಜೂರ ತಾಂಡ (ಶಿವಾಜಿನಗರ)ದಲ್ಲಿ ಜನಿಸಿದ್ದಾರೆ.
ರಮೇಶ ಮಂಗ್ಲಪ್ಪ ಲಮಾಣಿ ಅವರು ರಾಜ್ಯದಾದ್ಯಂತ ಬಂಜಾರ ಗಾಯನ ಕಾರ್ಯಕ್ರಮಗಳನ್ನು ನೀಡುವ ಮೂಲಕ ತಾಂಡಗಳಲ್ಲಿ ಕಲಾ ಶಿಕ್ಷಣದೊಂದಿಗೆ ಅರಿವು ಮೂಡಿಸುತ್ತಾ ಬಂಜಾರ ಕಲಾ ಜಾಗೃತಿ ಗೀತೆಗಳನ್ನು ಸತತವಾಗಿ ಹಾಡುತ್ತಾ ಬಂದಿದ್ದಾರೆ.
ಚಲನ ಚಿತ್ರಗಳಲ್ಲೂ ಹಾಡುವ ಅವಕಾಶ ಪಡೆದಿರುವ ಇವರು ಜೀ-ಕನ್ನಡ ವಾಹಿನಿಯ 20 ನೇ ಆವೃತ್ತಿಯ 1ನೇ ರನ್ನರ್ ಆಪ್ ಗಾಯಕ ಪಶಸ್ತಿ ವಿಜೇತರು, ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದು, ಹಲವಾರು ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತರಾಗಿ ಬಂಜಾರ ಕಲೆಗೆ ವಿಶೇಷ ಮನ್ನಣೆ ತಂದು ಕೊಟ್ಟ ಕಲಾವಿದರಾಗಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ರಮೇಶ ಮಂಗಲಪ್ಪ ಲಮಾಣಿ ಅವರಿಗೆ ‘ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ’ಯಿಂದ 2024ನೇ ಸಾಲಿನ ‘ಬಂಜಾರ ಗಾಯನ’ಕ್ಕಾಗಿ ‘ವಾರ್ಷಿಕ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.