ಗದಗ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರೋ ಸ್ತ್ರೀಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಸಾರಿಗೆ ಸಂಸ್ಥೆಯ ಬಸ್ ಗಳು ದಾರಿ ಮಧ್ಯೆಯೇ ಕೆಟ್ಟು ನಿಲ್ಲೋದು ಸಾಮಾನ್ಯವಾಗಿದೆ.
ಪ್ರಯಾಣಿಕರಿಗೆ ತಕ್ಕಂತೆ ಸಮರ್ಪಕ ಬಸ್ ಗಳ ವ್ಯವಸ್ಥೆ ಇಲ್ಲದೇ ಇರೋದೆ ಇದಕ್ಕೆಲ್ಲ ಕಾರಣವಾಗಿದೆ. ಸಾರಿಗೆ ಸಂಸ್ಥೆಯ ಪ್ರತಿ ಜಿಲ್ಲೆಯ ಘಟಕಗಳಲ್ಲಿ ದಿನನಿತ್ಯ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ.
ಈಗಾಗಲೇ ಡಕೋಟಾ ಬಸ್ ಹಾವಳಿಗೆ ಪ್ರಯಾಣಿಕರು ಬೇಸತ್ತಿದ್ದು, ಇದಕ್ಕೆ ಸಾಕ್ಷೀಕರಿಸುವಂತೆ ಗದಗ ನಗರದ ನಡು ರಸ್ತೆಯಲ್ಲಿಯೇ ಡಕೋಟಾ ಬಸ್ ಕೆಟ್ಟು ನಿಂತಿದೆ.

ಕೆಟ್ಟು ನಿಂತ ಬಸ್ ನ್ನ ನಿರ್ವಾಹಕರು, ಪ್ರಯಾಣಿಕರು ನಡು ರಸ್ತೆಯಲ್ಲಿ ತಳ್ಳುವ ದೃಶ್ಯ ನಗೆಪಾಟಿಲಿಗೆ ಈಡಾಗಿದೆ.
ಡಕೋಟಾ ಸಾರಿಗೆ ಬಸ್ ನ್ನ ತಳ್ಳುತ್ತಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಸುಸ್ತು ಹೊಡೆದಿದ್ದಾರೆ. ಗದಗ ನಗರದ ಮುಳಗುಂದ ನಾಕಾ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿಯಿಂದ ಹುನಗುಂದಕ್ಕೆ ಗದಗ ಮಾರ್ಗವಾಗಿ ಈ ಬಸ್ ಹೊರಟಿತ್ತು.
ಏಕಾ ಏಕಿ ಬಸ್ ಕೆಟ್ಟು ನಿಂತು ದುರಸ್ಥಿಗೆ ಬಂದಿದ್ದರಿಂದ, ಬಸ್ ಸ್ಟಾರ್ಟ್ ಮಾಡಲು ಸಿಬ್ಬಂದಿ ಪರದಾಟ ನಡೆಸಿದ್ದಾರೆ.ನಿರ್ವಾಹಕರು, ಪ್ರಯಾಣಿಕರು ಬಸ್ ತಳ್ಳುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಕಷ್ಟು ವೈರಲ್ ಅಗಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ಡಿಪೋದ ಬಸ್ ಇದಾಗಿದ್ದು, ಕೆಲ ಹೊತ್ತಿನ ನಂತರ ತಳ್ಳುತ್ತಾ ತಳ್ಳುತ್ತಾ ಬಸ್ ಸ್ಟಾರ್ಟ್ ಮಾಡಿಕೊಂಡು ಹೋಗಿದ್ದಾರೆ. ಹೀಗೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲೋತ್ತಿರೋ ಡಕೋಟಾ ಬಸ್ ಗಳ ವಿರುದ್ಧ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಟಿಕೇಟ್ ದರ ಹೆಚ್ಚಳ ಮಾಡಿದೆ. ಆದರೆ ಅದಕ್ಕೆ ತಕ್ಕಂತೆ, ಬಸ್ ಗಳ ಗುಣಮಟ್ಟ ಹಾಗೂ ಸಮರ್ಪಕ ಬಸ್ ಗಳ ವ್ಯವಸ್ಥೆ ಮಾಡುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ನಿಲ್ಲದ ಗೋಳಾಟವಾಗಿದ್ದು, ಸಾರಿಗೆ ವ್ಯವಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.