ಗದಗ: ಕಳೆದ 10-15 ವರ್ಷಗಳಿಂದ ಜಿಲ್ಲೆಯಲ್ಲಿ ಪಿಯುಸಿ ಫಲಿತಾಂಶ ಕಡಿಮೆ ಆಗಲು ಉತ್ತಮ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ವಲಸೆ ಹೋಗುವುದು ಪ್ರಮುಖ ಕಾರಣವಾಗಿದ್ದು, ಇದನ್ನು ತಡೆಯಬೇಕಾಗಿದೆ. ಬೇರೆ ಜಿಲ್ಲೆಗಿಂತ ಗದಗ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಕಡಿಮೆ ಏನಿಲ್ಲ. ಆದರೆ, ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಬಳ್ಳಾರಿಯ ಶ್ರೀ ಚೈತನ್ಯ ಸಂಸ್ಥೆಯ ಚೇರ್ಮನ್ ರಾಧಾಕೃಷ್ಣ ಅವರ ಚಿಂತನೆ, ತತ್ವ ಆದರ್ಶ ಪಾಲಿಸುವ ಅವಶ್ಯಕತೆ ಇದೆ ಎಂದು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್. ವಾಯ್ ಚಿಕ್ಕಟ್ಟಿ ಅಭಿಪ್ರಾಯಪಟ್ಟರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯವರು 18 ಪಿಯು ಕಾಲೇಜುಗಳನ್ನು ನಡೆಸುತ್ತಿದ್ದು, ಇಲ್ಲಿ ಶಿಸ್ತು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿ ಶಿಕ್ಷಣ ನೀಡುತ್ತಾರೆ. ರಾಧಾಕೃಷ್ಣ ಅವರು ನಿವೃತ್ತ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. “ಕಾಲೇಜಿನ ಸಿಬ್ಬಂದಿಗಳಿಗೆ ಉತ್ತಮ ವೇತನ, ಉತ್ತಮ ಶಿಕ್ಷಣ” ಎನ್ನುವುದೇ ರಾಧಾಕೃಷ್ಣ ಅವರ ಮೂಲ ಮಂತ್ರವಾಗಿದೆ ಎಂದರು.
ಬಳ್ಳಾರಿ, ಕೊಪ್ಪಳ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ರಾಧಾಕೃಷ್ಣ ಅವರು ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನ ತಮ್ಮ ಕುಟುಂಬ ಸದಸ್ಯರಂತೆ ಕಾಣುತ್ತಾರೆ. ಶಿಕ್ಷಕರಿಗೆ ಮುಖ್ಯವಾಗಿರುವ ವೇತನ ವಿಷಯದಲ್ಲಿ ಶಿಸ್ತನ್ನ ಅಳವಡಿಸಿಕೊಂಡಿದ್ದಾರೆ. ಇದರಿಂದ ಸಂಸ್ಥೆಯ ಸಿಬ್ಬಂದಿ ಕಾಳಜಿಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ಸಹಜವಾಗಿಯೇ ಫಲಿತಾಂಶ ಸುಧಾರಣೆ ಕಂಡುಕೊಳ್ಳುತ್ತದೆ ಅಂತ ಹೇಳಿದರು.
ಇದೇ ವೇಳೆ, ಶ್ರೀಚೈತನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಅವರು ಮಾತನಾಡಿ, 2005 ರಲ್ಲಿ 300 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಇಂದು 7000 ಪಿಯುಸಿ ವಿದ್ಯಾರ್ಥಿಗಳನ್ನ ಒಳಗೊಂಡಿದೆ. ಒಟ್ಟು 18 ಬ್ರ್ಯಾಂಚ್ ಗಳನ್ನು ನಮ್ಮ ಸಂಸ್ಥೆ ಹೊಂದಿದ್ದು, ಕಾಲೇಜಿನಲ್ಲಿ ಯಾರೇ ಬಂದರೂ ಪ್ರವೇಶ ನೀಡುತ್ತೇವೆ. ಶೇ. 35% ರಷ್ಟು ಫಲಿತಾಂಶ ಪಡೆದವರಿಗೂ ಪ್ರವೇಶ ನೀಡಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಪ್ರತಿ ವರ್ಷ ಶೇ.98% ರಷ್ಟು ಫಲಿತಾಂಶ ಕಾಣುತ್ತಿದ್ದೇವೆ ಎಂದರು.
ಪ್ರತಿ ವರ್ಷ ನಮ್ಮ ಸಂಸ್ಥೆಯಿಂದ ಕಲಿತು ಹೊರ ಹೊಗುವ ಸುಮಾರು 100 ವಿದ್ಯಾರ್ಥಿಗಳಿಗೆ ಮೆಡಿಕಲ್, ಎನ್ ಐ ಟಿ ಸೇರಿದಂತೆ ನೂರಾರು ವಿದ್ಯಾರ್ಥಿಗಳಿಗೆ ಇಂಜನೀಯರಿಂಗ್ ಪ್ರವೇಶ ಸಿಗುತ್ತಿದೆ. ಪ್ರತಿ ಶನಿವಾರ ಪಿಯುಸಿ ಪರೀಕ್ಷೆ ನಡೆಸುತ್ತೇವೆ. ತಿಂಗಳಿಗೊಮ್ಮೆ ಯುನಿಟ್ ಪರೀಕ್ಷೆ, ಮೂರು ತಿಂಗಳಿಗೊಮ್ಮೆ ಪರೀಕ್ಷೆ ಅಂತಿಮವಾಗಿ ಅಗಷ್ಟ್, ಸೆಪ್ಟಂಬರ್, ಅಕ್ಟೊಬರ್ ನಲ್ಲಿ ಮೂರು ಪರೀಕ್ಷೆ ನಡೆಸಿ ಸಿಇಟಿ ತರಬೇತಿ ನೀಡುತ್ತೇವೆ ಎಂದು ಹೇಳಿದರು.
ನಾನು ಶ್ರೀಮಂತರ ಮಕ್ಕಳಿಗಾಗಿ ಕಾಲೇಜು ಪ್ರಾರಂಭಿಸಿದವನಲ್ಲ. ಮಧ್ಯಮವರ್ಗದ ಕುಟುಂಬಗಳ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಲು ನನ್ನ ಸಂಸ್ಥೆ ಪ್ರಾರಂಭಿಸಿದ್ದೇನೆ. ನಮ್ಮ ಮುಖ್ಯ ಗುರಿ ಸೇವೆಯೇ ಹೊರತು ವ್ಯಾಪಾರವಲ್ಲ. ಮಕ್ಕಳು ಹುಟ್ಟಿದ ತಕ್ಷಣ ಯಾರೂ ದಡ್ಡರಾಗುವದಿಲ್ಲ. ಪಾಲಕರ ನೀರಿಕ್ಷೆಗೂ ಮೀರಿ ನಮ್ಮ ಸಂಸ್ಥೆ ಫಲಿತಾಂಶ ನೀಡಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಾಚಾರ್ಯರಾದ ಶ್ರೀ ಬಿಪಿನ್ ಚಿಕ್ಕಟ್ಟಿ, ಉಪ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
“ನಗರದ ಚಿಕ್ಕಟ್ಟಿ ಸಂಸ್ಥೆಯ ಜೊತೆಗೂಡಿ ಪಿಯು ಕಾಲೇಜಿಗೆ ಶಿಕ್ಷಕರನ್ನು ನಾವೇ ನೇಮಿಸುತ್ತೇವೆ.ಮೊದಲು ಶಿಕ್ಷಕರನ್ನು ಪರೀಕ್ಷಿಸಿ ನಂತರ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು.ಪ್ರತಿ ವಾರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಪಿಯುಸಿ ಪರೀಕ್ಷೆಗಳಿಗೆ ಬಳ್ಳಾರಿಯಿಂದ ಪ್ರಶ್ನೆ ಪತ್ರಿಕೆ ತಯಾರಿಸಿ ಕಳುಹಿಸಿ ಕೊಡಲಿದ್ದು, ಕ್ವಾಲಿಟಿ ಎಜುಕೇಶನ್ ನೀಡುವದು ನಮ್ಮ ಧ್ಯೇಯವಾಗಿದೆ.”
ಡಾ. ಪಿ ರಾಧಾಕೃಷ್ಣ. ಅಧ್ಯಕ್ಷರು. ಶ್ರೀ ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆ, ಬಳ್ಳಾರಿ.