ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿವಿಧ ಸ್ಥರ ಮತ್ತು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ಆರು ತಿಂಗಳಿನಿಂದ ಬಾಕಿ ಇರುವ ವೇತನವನ್ನು ತುರ್ತಾಗಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕು ಪಂಚಾಯತಿ ಕಚೇರಿ ಮತ್ತು ಜಿಲ್ಲೆಯ ಏಳು ತಾಪಂ ಕಚೇರಿಯ ಆವರಣದಲ್ಲಿ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕಪ್ಪು ಪಟ್ಟಿ ಕಟ್ಟಿಕೊಂಡು ಶಾಂತಿಯುತ ಅಸಹಕಾರ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ನೈತಿಕ ಬೆಂಬಲ ನೀಡಿ ಮಾತನಾಡಿದ ತಾಲೂಕ ಯೋಜನಾ ಅಧಿಕಾರಿ ಶಿವಕುಮಾರ ವಾಲಿ ಮತ್ತು ಲೆಕ್ಕ ಸಹಾಯಕ ಶ್ರೀಕಾಂತ ಬಾಲೆಹೊಸೂರ ಸಾವಿರಾರು ಯೋಜನಾ ಫಲಾನುಭವಿಗಳ ಜೀವನೋಪಾಯಕ್ಕಾಗಿ ಆಡಳಿತಾತ್ಮಕ ದಕ್ಷತೆಯನ್ನು ಕಾಪಾಡಿಕೊಳ್ಳಲು ಬಾಕಿ ಇರುವ ವೇತನ, ಸಾಮಗ್ರಿ ಮತ್ತು ಆಡಳಿತಾತ್ಮಕ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 4,000 ಗುತ್ತಿಗೆ ಸಿಬ್ಬಂದಿಗೆ ಕಳೆದ ಐದರಿಂದ ಏಳು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ.ಈ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಹೊಂದಿರುವ ಸಿಬ್ಬಂದಿ ಉನ್ನತ ಅಧಿಕಾರಿಗಳನ್ನು ಈ ಸಂಬಂಧ ಸಂಪರ್ಕಿಸಿ ಬಾಕಿ ಇರುವ ವೇತನ ಪಾವತಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಎಂಜಿನಿಯರ್ಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಕಾರ್ಮಿಕರು ಮತ್ತು ಕ್ಷೇತ್ರ ಸಿಬ್ಬಂದಿಗೆ ಇದುವರೆಗೂ ವೇತನ ಪಾವತಿಯಾಗಿಲ್ಲ.ವೇತನ ಪಾವತಿ ಮಾಡುವ ಯಾವುದೇ ಸೂಚನೆ ಇಲ್ಲದ ಕಾರಣ, ಪ್ರತಿಭಟನೆ ನಡೆಸಿದ ಸಿಬ್ಬಂದಿ ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿ, ಕೆಲಸ ಬಹಿಷ್ಕರಿಸಿದ್ದಾರೆ. ಅವರು ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಕಚೇರಿಗಳ ಮುಂದೆಯೂ ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಯಡಿ ಗ್ರಾಮೀಣ ಜನರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುವಲ್ಲಿ ಈ ಸಂಯೋಜಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಲಕ್ಷಾಂತರ ಯೋಜನಾ ಫಲಾನುಭವಿಗಳ ಜೀವನೋಪಾಯಕ್ಕಾಗಿ ಆಡಳಿತಾತ್ಮಕ ದಕ್ಷತೆಯನ್ನು ಕಾಪಾಡಿಕೊಳ್ಳಲು ಬಾಕಿ ಇರುವ ವೇತನ, ಸಾಮಗ್ರಿ ಮತ್ತು ಆಡಳಿತಾತ್ಮಕ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ನಿಧಿಯ ಕೊರತೆಯು ದಿನನಿತ್ಯದ ಕಾರ್ಯಾಚರಣೆಗಳು, ಮೇಲ್ವಿಚಾರಣೆ ಮತ್ತು ತಳಮಟ್ಟದ ಅನುಷ್ಠಾನದ ಮೇಲೆ ಪರಿಣಾಮ ಬೀರಿದೆ ಎಂದರು.
ಟಿ.ಎ.ಇ ಫಕ್ಕೀರೇಶ ನಿಟ್ಟಾಲಿ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ನರೇಗಾ ಪಾತ್ರ ದೊಡ್ಡದಿದೆ. ಅದನ್ನು ಸಮರ್ಥವಾಗಿ ನಾವೆಲ್ಲ ಮುಟ್ಟಿಸುತ್ತಿದ್ದೇವೆ.ಆದರೆ ನಮಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ.ಪ್ರತಿ ತಿಂಗಳು ವೇತನ ದೊರೆಯುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ಶಾಲಾ ದಾಖಲಾತಿ, ಕೌಟುಂಬಿಕ ಆರೋಗ್ಯ ಸಮಸ್ಯೆ ಇನ್ನಿತರ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾ ಹಂತದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಡಿಎಎಂ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ,ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಗ್ರಾಮ ಕಾಯಕ ಮಿತ್ರರು, ಬಿಎಫ್ ಟಿ, ಟಿ.ಆರ್.ಎಂ ಸೇರಿ ವಿವಿಧ ಹುದ್ದೆಗಳಲ್ಲಿ 250ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲವೆಂದು ಅಳಲು ತೋಡಿಕೊಂಡರು.
ಸರ್ಕಾರ ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು. ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಸೇವಾ ಭದ್ರತೆ ನೀಡಬೇಕು. ವೇತನ ಪಾವತಿ ವಿಳಂಬ ಮಾಡಬಾರದು. ಪ್ರತಿ ತಿಂಗಳು ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಸಂದರ್ಭದಲ್ಲಿ ಟಿ.ಸಿ ಹರೀಶ ಸೊಬರದ, ಟಿಎಂಐಎಸ್ ಮೋಹನ ಹೊಂಬಾಳ, ಮಹಾಂತೇಶ ಪಾಟೀಲ್, ಟಿಎಇ ಫಕ್ಕೀರೇಶ ನಿಟ್ಟಾಲಿ, ಮಂಜುನಾಥ ತಳವಾರ, ಶ್ರೀನಿವಾಸ ಕಲಾಲ್, ಶ್ರೀಧರ ಕುಲಕರ್ಣಿ, ಬಿ.ಕೆ ಕರಕನಗೌಡ್ರು, ಹುಲಗಪ್ಪ, ಸತೀಶ ಅರಿಷಿನದ, ಕಾಶೀಮಸಾಬ ನಧಾಫ್, ತಿರಕಪ್ಪ, ಶಿಲ್ಪಾ ಲಮಾಣಿ, ಗಂಗಮ್ಮ, ಬಾರತಿ, ಗೌರಮ್ಮ ಮಂಜುಳಾ, ಶಿವಮ್ಮ, ವಿನೋದ, ಪರಮೇಶ ಭೀಮೇಶ ಇದ್ದರು.