ಲಕ್ಷ್ಮೇಶ್ವರ:ಕೆಲವು ತಿಂಗಳ ಹಿಂದೆ ಟೊಮೆಟೋಗೆ ಚಿನ್ನದ ಬೆಲೆ ಇತ್ತು. ಇದೇ ಕಾರಣಕ್ಕೆ ಅನೇಕ ರೈತರು ಏಕಾಏಕಿ ಟೊಮೆಟೊ ಬೆಳೆಯಲು ಆರಂಭಿಸಿದ್ದರು, ಹೀಗಾಗಿ ಗದಗ ಜಿಲ್ಲೆ ಹಾಗೂ ತಾಲೂಕಗಳಲ್ಲಿ ರೈತರು ಟೊಮೆಟೊ ಬಿತ್ತನೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಸದ್ಯದ ಟೊಮೆಟೋ ದರದ ಪರಿಸ್ಥಿತಿ ನೋಡಿದಾಗ, ರೈತರ ಪಾಲಿಗೆ ಕೃಷಿ ಜೀವನ ಜೂಜಾಟ ಎಂಬಂತಾಗಿದೆ ಎನ್ನೋ ಮಾತು ಪದೇ ಪದೇ ನಿಜವಾಗುತ್ತಿದ್ದು, ರೈತ ಸಮೂಹ ನಷ್ಟ ಅನುಭವಿಸುತ್ತಿದ್ದಾನೆ.
ಲಕ್ಷ್ಮೇಶ್ವರ ವರದಿ: ಪರಮೇಶ ಲಮಾಣಿ
ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಟೊಮೆಟೊ ಬೆಳೆದ ರೈತರು ತೀವ್ರ ಕಂಗಾಲಾಗಿದ್ದಾರೆ. ಒಬ್ಬ ಕೂಲಿ ಕಾರ್ಮಿಕನಿಗೆ ದಿನಕ್ಕೆ 300 ರೂ.ನೀಡಬೇಕು ಇನ್ನು ಮಾರುಕಟ್ಟೆಗೆ ತರಬೇಕಾದರೆ ಸರಕು ಸಾಗಾಣಿಕೆ ವೆಚ್ಚ ಅಂತ, ಬಾಕ್ಸಿಗೆ 30 ರೂ.ನೀಡಬೇಕು. ಇವೆಲ್ಲಾ ಖರ್ಚು ಲೆಕ್ಕಹಾಕಿದರೆ ರೈತರಿಗೆ ಏನೂ ಸಹ ಲಾಭವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹರದಗಟ್ಟಿ ಗ್ರಾಮದ ದೇವಪ್ಪ ಮಾಳಮನಿ ಎಂಬ ರೈತ ಒಂದು ಎಕರೆಯಲ್ಲಿ ಸುಮಾರು ₹60 ರಿಂದ ₹ 70 ಸಾವಿರ ಗಳಷ್ಟು ಖರ್ಚು ಮಾಡಿದ್ದು,ಟೊಮೆಟೊ ಬೆಳೆದು ಉತ್ತಮ ಆದಾಯದ ನೀರಿಕ್ಷೆಯಲ್ಲಿದ್ದ. ಆದರೆ ಆತನ ನೀರಿಕ್ಷೆ ಹುಸಿಯಾಗಿದೆ. ಸಾಲ ಸೋಲ ಮಾಡಿ, ಟೊಮೇಟೋ ಬೆಳೆಗೆ ರೋಗ ಬಾರದಂತೆ ಬೆಳೆದಿದ್ದ ಆದರೆ, ಮಾರುಕಟ್ಟೆಗೆ ತಂದರೆ, ತೀರಾ ಕಡಿಮೆ ಬೆಲೆಗೆ ಮಾರಾಟ ಆಗ್ತಿರೋ ಹಿನ್ನೆಲೆ, ಖರ್ಚು ಮಾಡಿದ ಹಣವೂ ಸಹ ವಾಪಸ್ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆ ಅವಧಿಯಲ್ಲಿ ಟೊಮೆಟೊ ಹೆಚ್ಚಿನ ಇಳುವರಿ ಬಂದಿದ್ದು, ಬೇಡಿಕೆ ಕುಸಿದು ರೈತರನ್ನು ಕಂಗೆಡಿಸಿದೆ. ಮತ್ತೊಂದೆಡೆ ಟೊಮೆಟೊ ಹಣ್ಣುಗಳನ್ನು ಕೆಲವರು ರಸ್ತೆ ಬದಿಗೆ ಸುರಿದು ನಷ್ಟ ಅನುಭವಿಸುತ್ತಿದ್ದಾರೆ.
ಪ್ರಸ್ತುತ ಒಂದು ಕೆಜಿ ಟೊಮೆಟೊಗೆ ₹ 5 ಕ್ಕೆ ಕುಸಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುಸಿದಿದೆ. 1 ಬಾಕ್ಸ್ (20 ರಿಂದ 25 ಕೆ.ಜಿ) ₹100 ರಿಂದ ₹125 ಇದ್ದು, ಪಟ್ಟಣದಲ್ಲಿ ಶುಕ್ರವಾರ ಸಂತೆ ಮತ್ತು ಹಳ್ಳಿ-ಹಳ್ಳಿ ಸಂತೆಯಲ್ಲಿ ಕೆಜಿ 1 ಕೆಜಿ. ಗೆ ಕ್ಕೆ ₹ 5 ರಂತೆ ಮಾರಾಟವಾಗ್ತಿದೆ.
ಇದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ನಷ್ಟವಾಗಿದೆ ಎಂದು ಹರದಗಟ್ಟಿ ಗ್ರಾಮದ ಕೃಷಿಕ ದೇವಪ್ಪ ಮಾಳಗಿಮನಿ ಹೇಳಿದರು.
ಟೊಮೆಟೊಗೆ ಬೆಲೆ ಇಲ್ಲದೆ ಇರುವುದರಿಂದ ಕೊಳ್ಳುವವರಿಗೂ ನಷ್ಟವಾಗುತ್ತಿದೆ. ಸಾಗಣೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯ ಲಾಭವನ್ನು ತಗ್ಗಸಿದೆ. 1 ಬಾಕ್ಸ್ ಟೊಮೆಟೊ ₹100 ಇಲ್ಲವೇ ₹120ಕ್ಕೂ ತಂದು ಮಾರಾಟ ಮಾಡಿದರೂ ನಿರ್ವಹಣಾ ವೆಚ್ಚದ ಏರಿಕೆಯಿಂದ ಟೊಮೆಟೊ ಕಟಾವು ಮಾಡಲಾಗದ ಸ್ಥಿತಿ ಇದೆ. ಇದರಿಂದ ಹಣ್ಣು ಗಿಡದಲ್ಲಿ ಕೊಳೆತು ಉದುರುತ್ತಿದೆ ಎನ್ನುತ್ತಾರೆ ಬೆಳೆಗಾರರು.