ಗದಗ: ಚಲನಚಿತ್ರದಲ್ಲಿರುವ ಏನೂ ಅರಿಯದ ಒಬ್ಬ ಹಳ್ಳಿಯ ಮುಗ್ದ ಬಾಲಕ ತನ್ನ ಸತತ ಪ್ರಯತ್ನದಿಂದ ಹಾಗೂ ಆಸಕ್ತಿಯಿಂದ ವಿಜ್ಞಾನದ ಮಾದರಿಗಳನ್ನು ಮಾಡುತ್ತಾ ಹೇಗೆ, ಹೆಸರುವಾಸಿಯಾದನೋ ಹಾಗೆ ತಾವೂ ಸಹ, ತಮ್ಮಲ್ಲಿರುವ ಜ್ಞಾನದಿಂದ ಏನಾದರೊಂದು ಕಂಡುಕೊಂಡು ಸಾಧನೆ ಮಾಡಿ ಸಾಧಕರಾಗಿರಿ ಎಂದು, ಹಿರಿಯ ಸಾಹಿತಿಗಳಾದ ಶ್ರೀ ಜೆ. ಕೆ. ಜಮಾದಾರ ಅವರು ಹೇಳಿದರು.
ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಮುನ್ನುಡಿ’ಮಕ್ಕಳ ಚಲನಚಿತ್ರ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಉಪನಿರ್ದೇಶಕರಾದ ಶ್ರೀ ಎ. ಎನ್. ನಾಗರಳ್ಳಿ ಸರ್ ಮಾತನಾಡಿ, ಚಲನಚಿತ್ರದಲ್ಲಿರುವ ಬಾಲಕನ ಸಾಧನೆಯನ್ನು ನೋಡಿ ಸ್ಪೂರ್ತಿಗೊಂಡು ತಾವುಗಳು ಚಿಕ್ಕವರಿರುವಾಗಲೇ ಸಣ್ಣ ಪುಟ್ಟ ಪ್ರಯೋಗಗಳನ್ನು ಮಾಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿರಿ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಶಂಕರ ಹೂಗಾರ ಅವರು, ಮಕ್ಕಳ ಕುರಿತು ತಿಳಿಸುತ್ತ ಶ್ರವಣ ಮಾಧ್ಯಮ ಹಾಗೂ ದೃಷ್ಟಿ ಮಾಧ್ಯಮದ ಜೊತೆಗೆ ಚಲನಚಿತ್ರದಲ್ಲಿ ಸಂಗೀತ ಮಾಧ್ಯಮವೂ ಒಂದು ಸೇರಿರುವುದರಿಂದ ಸ್ವ-ಆಸಕ್ತಿಯಿಂದ, ಶಾಂತತೆಯಿಂದ ಕುಳಿತು ತಿಳಿದುಕೊಳ್ಳುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲೆಂದೇ ಇರುವ ‘ಪ್ರತಿಭಾ ಕಾರಂಜಿ’ ಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದು, ಜಗತ್ತಿಗೆ ಹೆಸರುವಾಸಿಯಾಗಿರಿ ಎಂದರು.
‘ಮುನ್ನುಡಿ’ ಚಲನಚಿತ್ರ ನಿರ್ಮಾಪಕರಾದ, ಬಿಗ್-ಬಾಸ್ ಸೀಜನ್-5 ರ ಕಾಮನ್ ಮ್ಯಾನ್ ಆಗಿ ಪ್ರವೇಶಿಸಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ, ಮಜಾಭಾರತ ಸೀಜನ್-2ರಲ್ಲಿ ಭಾಗವಹಿಸಿ ಹಾಗೂ ಐದು ಚಲನ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ ದಿವಾಕರ್ ಅವರು, ನಾನು ಮಾತನಾಡಲಾರೆ ನನ್ನ ‘ಮುನ್ನುಡಿ’ ಚಲನಚಿತ್ರ ನೋಡಿದ ಮೇಲೆ ತಾವು ಮಾತನಾಡಿರಿ, ನಾನು ತಮ್ಮ ಮಾತುಗಳನ್ನು ಕೇಳಲು ಬಂದವನು, ಈ ಚಲನಚಿತ್ರವು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಲಿದೆ ಎಂದರು.
ಅಧ್ಯಕ್ಷರಾದ ಪ್ರೊ. ಎಸ್. ವಾಯ್ ಚಿಕ್ಕಟ್ಟಿಯವರು ಮಾತನಾಡಿ, ಮಕ್ಕಳಲ್ಲಿ ಅಂತರ್ಗತವಾದ ಪ್ರತಿಭೆಯನ್ನು ಹೊರಹಾಕಲು, ಸ್ಪೂರ್ತಿದಾಯಕವಾದ ‘ಮುನ್ನುಡಿ’ಯಂತಹ ಮಕ್ಕಳ ಚಲನಚಿತ್ರಗಳು ಅತ್ಯವಶ್ಯಕ, ಪ್ರತಿಯೊಂದು ಮಗುವಿನಲ್ಲೂ ಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ಹೊರತರಲು ಸರಿಯಾದ ಮಾರ್ಗದರ್ಶಕರು ಹಾಗೂ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಾಗ, ಮಕ್ಕಳು ನಿರ್ಭಿತರಾಗಿ ಪ್ರದರ್ಶನ ನೀಡಿ ಸಾಧಕಾರಾಗಿ ಹೊರಹೊಮ್ಮುತ್ತಾರೆ. ಮನೆಗೆ ಸೀಮಿತವಾದ ಮಕ್ಕಳಾಗದೇ ದೇಶಕ್ಕೆ ಕೊಡುಗೆ ಕೊಡುವ ಮಕ್ಕಳಾಗುತ್ತಾರೆ ಎಂದರು.
‘ಮುನ್ನುಡಿ’ ಮಕ್ಕಳ ಚಲನಚಿತ್ರದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಚಿತ್ರದ ನಿರ್ಮಾಪಕರಾದ ಶ್ರೀ ದಿವಾಕರ, ಹಿರಿಯ ಸಾಹಿತಿಗಳಾದ ಶ್ರೀ ಜೆ. ಕೆ. ಜಮಾದಾರ, ನಿವೃತ್ತ ಉಪನಿರ್ದೇಶಕರಾದ ಎ. ಎನ್. ನಾಗರಳ್ಳಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಂಕರ ಹೂಗಾರ ಹಾಗೂ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ನೆರವೇರಿಸಿದರು. ನಂತರ ಮಕ್ಕಳು ಅತ್ಯಂತ ಶಾಂತ ಚಿತ್ತರಾಗಿ ಕುತೂಹಲ ಭರಿತರಾಗಿ ಎಕಾಗ್ರತೆಯಿಂದ ಚಲನಚಿತ್ರವನ್ನು ವೀಕ್ಷಿಸಿದರು.