ಲಕ್ಷ್ಮೇಶ್ವರ: ಕೊರೊನಾ ಕಾಲಘಟ್ಟದಲ್ಲಿ ತತ್ತರಿಸಿ ಹೋದ ಬೀದಿ ಬದಿ ವ್ಯಾಪಾರಿಗಳು ಹೊಟ್ಟೆ ಹೊರೆದುಕೊಳ್ಳಲು ಕೈ ಸಾಲ ಮಾಡಿ, ಮೀಟರ್ ಬಡ್ಡಿ ದಂಧೆಯಲ್ಲಿಸಿಲುಕಿ ಹೊಯ್ದಾಡಬೇಕಾದ ಸನ್ನಿವೇಶ ಸೃಷ್ಟಿಯಾದಾಗ ಕೇಂದ್ರ ಸರಕಾರ ಜಾರಿಗೊಳಿಸಿದ ಪಿಎಂ ಸ್ವನಿಧಿ ಯೋಜನೆ ಕಳೆದ 3 ವರ್ಷದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದೀಗ ಮತ್ತೊಮ್ಮೆ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳ ಮೂಲಕ ಜಾರಿಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಪುರಸಭೆ ಲಕ್ಷ್ಮೇಶ್ವರ ಅವರ ನೇತೃತ್ವದಲ್ಲಿ ನಿಲುಗುಂದದ ಬಸವರಾಜ ಜಕ್ಕಮ್ಮನ್ನವರ್ ನೇತೃತ್ವದ ಜೈ ಭೀಮ್ ಕಲಾ ತಂಡವು ಬೀದಿ ಬದಿ ವ್ಯಾಪಾರಸ್ಥರಿಗೆ ಉತ್ತೇಜನ ನೀಡಲು ಜನಪದ ಕಲಾತಂಡದಿಂದ ಬೀದಿ ನಾಟಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಅಡಿಯಲ್ಲಿ ಸಾಲ ಸೌಲಭ್ಯವನ್ನು ಈಗ ಬೀದಿ ವ್ಯಾಪಾರಿಗಳೊಂದಿಗೆ ಹಾಲು ಮಾರಾಟಗಾರರು ಮತ್ತು ಪತ್ರಿಕೆ ವ್ಯಾಪಾರಿಗಳಿಗೆ ವಿಸ್ತರಿಸಲಾಗಿದೆ. ಇವರೆಲ್ಲರೂ ತಮ್ಮ ವ್ಯಾಪ್ತಿಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಪರ್ಕಿಸಿ ಆಧಾರ್ ಕಾರ್ಡ್, ವ್ಯಾಪಾರದ ಫೋಟೋ ಇತ್ಯಾದಿ ನೀಡಿ ಐಡಿ ಕಾರ್ಡ್ ಪಡೆದುಕೊಳ್ಳಬಹುದು ಎಂದು ಹೇಳಿದರು.

ಏನಿದು ಪಿಎಂ ಸ್ವನಿಧಿ ?
ಬೀದಿ ಬದಿಯಲ್ಲಿ ಆರ್ಥಿಕ ಚಟುವಟಿಕೆ ಮಾಡುವ ಎಲ್ಲ ಬಗೆಯ ಸಣ್ಣ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು 2020 ರಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಕನಿಷ್ಠ 10 ಸಾವಿರದಿಂದ ಗರಿಷ್ಠ 50 ಸಾವಿರದವರೆಗೂ ಸಾಲ ಸೌಲಭ್ಯವನ್ನು ಬೀದಿ ವ್ಯಾಪಾರಿಗಳಿಗೆ ಕಲ್ಪಿಸುತ್ತದೆ.
ಸುಲಭ ರೀತಿಯ ಲೋನ್
ಬ್ಯಾಂಕ್ ಲೋನ್ ಪಡೆಯಬೇಕಾದರೆ ದಾಖಲೆ ಪತ್ರಗಳು, ಪ್ರತಿಖಾತ್ರಿದಾರರು, ಆದಾಯ ಮೂಲ ಇತ್ಯಾದಿ ಅಗತ್ಯಗಳನ್ನು ಈಡೇರಿಸಬೇಕಾಗಿದ್ದು, ಬೀದಿ ವ್ಯಾಪಾರ ಮಾಡುವ ಬಡವರಿಗೆ ಇಂಥ ಯಾವುದೇ ಬೆಂಗಾವಲು ಇಲ್ಲದ ಕಾರಣ ಲೋನ್ ಪಡೆಯುವುದೇ ದುಸ್ತರವಾಗಿತ್ತು. ಅನಿವಾರ್ಯ ಸಂದರ್ಭದಲ್ಲಿಅವರು ಖಾಸಗಿ ಲೇವಾದೇವಿಗಾರರಿಂದ ಕೈಸಾಲ ಪಡೆಯುವುದು, ಅವರು ವಿಧಿಸುವ ಚಕ್ರಬಡ್ಡಿ, ಮೀಟರ್ ಬಡ್ಡಿ ದಂಧೆಗೆ ಸಿಲುಕಿ ಸಾಲದ ಸುಳಿಯಲ್ಲಿಒದ್ದಾಡಿ ಕಣ್ಣೀರಲ್ಲಿ ಕೈತೊಳೆಯುವುದು ಸಾಮಾನ್ಯವಾಗಿತ್ತು.
ಕೊರೊನಾ ಅವಧಿಯಲ್ಲಿ ಇದು ಮತ್ತಷ್ಟು ವಿಷಮಗೊಂಡಿತ್ತು. ಇಂಥ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮರ್ಭರ ಭಾರತ ಯೋಜನೆಯಲ್ಲಿ ಪಿಎಂ ಸ್ವನಿಧಿ ಜಾರಿಗೊಳಿಸಿದ್ದರು. ಕಡಿಮೆ ಬಡ್ಡಿದರದಲ್ಲಿ ಸುಲಭದಲ್ಲಿ ಲೋನ್ ನೀಡುವುದು ಇದರ ಪರಿಕಲ್ಪನೆ.
ನಗರಾಡಳಿತ ವ್ಯಾಪ್ತಿ
ಪ್ರತೀ ನಗರಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಬೀದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಂದ ಅತ್ಯಂತ ಸರಳ ದಾಖಲೆ ಸಂಗ್ರಹಿಸಿ ಮಾನ್ಯತೆ ನೀಡುವುದಲ್ಲದೆ, ಲೋನ್ ನೀಡುವ ಬ್ಯಾಂಕಿಗೆ ಶಿಫಾರಸು ಪತ್ರ ನೀಡುತ್ತವೆ. ಅದರಂತೆ ಆರಂಭದಲ್ಲಿ 10 ಸಾವಿರ ಲೋನ್ ನೀಡಲಾಗುತ್ತದೆ. ಅದನ್ನು ಮರುಪಾವತಿ ಮಾಡಿದಂತೆ 20 ಹಾಗೂ 50 ಸಾವಿರವರೆಗೂ ನೀಡಲಾಗುತ್ತದೆ. 2020ರಲ್ಲಿ ಎಲ್ಲ ನಗರಾಡಳಿತ ಸಂಸ್ಥೆಗಳು ಸರಕಾರ ನೀಡಿದ ಗುರಿಯ ಪ್ರಕಾರ ವ್ಯಾಪಾರಿಗಳನ್ನು ಗುರುತಿಸಿದ್ದು, ಎಲ್ಲರೂ ಲೋನ್ ಪಡೆದುಕೊಂಡಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಯಶಸ್ವಿ ಲೋನ್ ಸರಣಿ ಮುಂದುವರಿಸಿದ್ದಾರೆ.
ಹಾಲು, ಪತ್ರಿಕಾ ವಿತರಕರಿಗೂ ಅವಕಾಶ
ಎಲ್ಲ ಬೀದಿ ಬದಿ ವ್ಯಾಪಾರಿಗಳು, ಲೈನ್ ಸೇಲ್ ಮಾಡುವವರು, ತಳ್ಳುಗಾಡಿ ವ್ಯಾಪಾರಿಗಳು, ಪೆಟ್ಟಿಗೆ ಅಂಗಡಿಯವರು, ಸಂತೆಯಲ್ಲಿ ತರಕಾರಿ ಇತ್ಯಾದಿ ಮಾರುವವರು, ತಲೆ ಹೊರೆ ವ್ಯಾಪಾರಿಗಳು, ಚರುಮುರಿ ಇತ್ಯಾದಿ ಫಾಸ್ಟ್‌ಫುಡ್ ವ್ಯಾಪಾರಿಗಳು ಯೋಜನೆ ವ್ಯಾಪ್ತಿಯಲ್ಲಿ 3 ವರ್ಷಗಳ ಹಿಂದೆ ಲೋನ್ ಪಡೆದಿದ್ದರು. ಇದೀಗ ಮತ್ತೊಮ್ಮೆ ಸಮೀಕ್ಷೆ ಮಾಡಿ ಬಾಕಿ ಉಳಿದವರು, ಹೊಸಬರನ್ನು ಶೋಧಿಸಿ ಯೋಜನಾ ವ್ಯಾಪ್ತಿಗೆ ತರಲು ಸರಕಾರ ಸೂಚಿಸಿದೆ.
ಇದರಲ್ಲಿ ಹಾಲು ಮಾರುವವರು ಮತ್ತು ದಿನಪತ್ರಿಕೆ ವಿತರಕರನ್ನು ಕೂಡ ಪರಿಗಣಿಸಲಾಗಿದೆ. ಇವರೆಲ್ಲರೂ ತಮ್ಮ ವ್ಯಾಪ್ತಿಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಪರ್ಕಿಸಿ ಆಧಾರ್ ಕಾರ್ಡ್, ವ್ಯಾಪಾರದ ಫೋಟೋ ಇತ್ಯಾದಿ ನೀಡಿ ಐಡಿ ಕಾರ್ಡ್ ಪಡೆದುಕೊಳ್ಳಬಹುದು.
ಅವರ ಪಟ್ಟಿಯನ್ನು ಬ್ಯಾಂಕಿಗೆ ನೀಡಿ ಸಾಲ ಒದಗಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು. ಪಟ್ಟಣದ ಬಾನು ಮಾರ್ಕೆಟ್ ನಲ್ಲಿ ಕಲಾ ತಂಡದಿಂದ ಬೀದಿ ನಾಟಕ ಮಾಡುವ ಮೂಲಕ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ್, ಬಸವರಾಜ ಓದುನವರ್, ವಿಜಯ ಕರಡಿ, ಪೂಜಾ ಕರಾಟೆ, ರಾಮಪ್ಪ ಗಡದವರ, ಕವೀತಾ ಶರಸೂರಿ, ಮಂಜುಳಾ ಗುಂಜಳ, ವಾಣಿ ಹತ್ತಿ ಹಾಗೂ ಪುರಸಭೆ ಸಿಬ್ಬಂದಿ ವರ್ಗ, ಬೀದಿ ವ್ಯಾಪಾರಸ್ಥರು ಇದ್ದರು.