ಗದಗ: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಹಂತವಾದ ದ್ವಿತೀಯ ಪಿ.ಯು. ಅವಧಿಯಲ್ಲಿ ಕೇವಲ ವಿದ್ಯಾರ್ಥಿ ಹಾಗೂ ಶಿಕ್ಷಕರ ಪಾತ್ರ ಮಾತ್ರವಲ್ಲದೇ ಅಷ್ಟೇ ಪ್ರಮಾಣದ ಜವಾಬ್ದಾರಿ ಪಾಲಕರದ್ದೂ ಆಗಿರುತ್ತದೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರಮನ್‌ರಾದ ಪ್ರೊ.ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ರಾಜೇಶ ಕುಲಕರ್ಣಿಯವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಸಹಾಯ ಸಹಕಾರವನ್ನು ನೀಡಲಿ ಎಂದು ಆಶಿಸಿದರು.
ಸಂಸ್ಥೆಯ ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್ ಈ ವೇಳೆ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ವಿಷಯಗಳನ್ನು ಬೋಧಿಸುವುದರ ಜೊತೆಗೆ ಉತ್ತೇಜನಕಾರಿಯಾದ, ನೈತಿಕತೆ ಪ್ರಧಾನವಾಗಿರುವ ಹಲವಾರು ವಿಷಯಗಳನ್ನು ಸಾಂದರ್ಭಿಕವಾಗಿ ಬೋಧಿಸುವ ಪರಿಪಾಠವನ್ನು ನಮ್ಮ ಸಂಸ್ಥೆ ರೂಪಿಸಿಕೊಂಡಿದೆ. ಈ ನಮ್ಮ ಪ್ರಯತ್ನಕ್ಕೆ ವಿದ್ಯಾರ್ಥಿಗಳ ಹಾಗೂ ವಿಶೇಷವಾಗಿ ಪಾಲಕರ ಪ್ರೋತ್ಸಾಹ, ಪ್ರೇರಣೆ, ಆಸಕ್ತಿ, ಅತ್ಯಂತ ಅಗತ್ಯ ಹಾಗೂ ಅವಶ್ಯ ಎಂದು ನುಡಿದರು. ಜೊತೆಗೆ ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಆ ಮಾರ್ಗದಲ್ಲಿ ವಿದ್ಯಾರ್ಥಿಗಳನ್ನು ಸಿದ್ದಪಡಿಸುವ ನಮ್ಮ ಕಾರ್ಯಕ್ಕೆ ಪಾಲಕರ ಸ್ಪಂದನೆ ಇರಲಿ ಎಂದರು.
ಪ್ರಾಚಾರ್ಯರಾದ ಪ್ರೇಮಾನಂದ ರೋಣದ ಅವರು ಮಾತನಾಡಿ, ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವ ವಿಕಸನವಾಗುವಂತೆ ನಮ್ಮ ಕಾಲೇಜು ನಿರಂತರ ಪ್ರಯತ್ನ ಮಾಡುತ್ತಿದೆ. ಇಂತಹ ಕಾರ್ಯದಲ್ಲಿ ಪಾಲಕರ ಸಂಪೂರ್ಣ ಸಹಕಾರವಿದ್ದರೆ ಮಾತ್ರ ವಿದ್ಯಾರ್ಥಿಗಳು ಯಶಸ್ಸಿನ ಶಿಖರ ತಲುಪಬಲ್ಲರು ಎಂದು ಪ್ರಾ. ಪ್ರೇಮಾನಂದ ರೊಣದ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಪ್ರತಿಪಾದಿಸಿದರು.
ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕರಾದ ಪ್ರೊ. ಸಯ್ಯದ್ ಮತೀನ್ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ, ಪ್ರೊ. ರಾಹುಲ್ ಒಡೆಯರ್ ಹಾಗೂ ಆಡಳಿತಾಧಿಕಾರಿಯಾದ ಶ್ರೀ. ಎಮ್.ಸಿ.ಹಿರೇಮಠ ಉಪಸ್ಥಿತರಿದ್ದರು.
ಪಾಲಕರ ಪರವಾಗಿ ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ ಮಾತನಾಡಿ, ಸಂಸ್ಥೆಯ ಸರ್ವಕಾರ್ಯದಲ್ಲೂ ಸಾಧ್ಯವಾದಷ್ಟು ಸಹಕಾರ ನೀಡುವ ಭರವಸೆ ನೀಡಿದರು. ಶ್ರೀ ಕೆರೂರ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಕಾಲೇಜಿನ ಕಾರ್ಯವೈಖರಿಯನ್ನು ಶ್ಲಾಘಿಸುವುದರ ಜೊತೆಗೆ ನಮ್ಮ ಮಕ್ಕಳು ಮೊಬೈಲನಿಂದ ಉತ್ತಮ ವಿಚಾರಗಳನ್ನು ಪಡೆಯಲಿ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರೊ. ಹೇಮಂತ ದಳವಾಯಿ ಸರ್ವರನ್ನು ಸ್ವಾಗತಿಸಿದರೆ ಪ್ರೊ. ವಿಜಯ ಹೆಬಸೂರ ವಂದನಾರ್ಪಣೆಗೈದರು. ಮುರಳಿಧರ ಸಂಕನೂರ ಕಾರ್ಯಕ್ರಮವನ್ನು ನಿರೂಪಿಸಿದರು.