ಗದಗ: ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಬಾಲಕ–ಪಾಲಕ–ಶಿಕ್ಷಕ ಎಂಬ ತ್ರಿವೇಣಿ ಸಂಗಮದಡಿಯಲ್ಲಿ ಚಿಂತನೆ ಮತ್ತು ಚರ್ಚೆಗಳು ನಡೆಯುವಾಗ ಮಾತ್ರ ಸರ್ವಾಂಗೀಣ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹಿರಿಯ ಉಪನ್ಯಾಸಕರಾದ ಪ್ರೊ. ಮುರಳೀಧರ ಸಂಕನೂರ ಅವರು ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಸ್ಟುಡೆಂಟ್ ಎಜ್ಯುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ 2025–26ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡುತ್ತಾ, “ಪಾಲಕರು ತಮ್ಮ ಮಕ್ಕಳಲ್ಲಿ ಸಂಸ್ಕೃತಿ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಮುಂದಾಗಬೇಕು. ಮನೆಯಲ್ಲಿ ನೀಡುವ ಪಾಠವೇ ಶಾಲೆಯ ಪಾಠಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಶಿವಕುಮಾರ ವಜ್ರಬಂಡಿ ಮಾತನಾಡಿ, “ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಶೈಕ್ಷಣಿಕ ಯೋಜನೆಗಳ ಉದ್ದೇಶವೇ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ. ಕೆಲವೊಮ್ಮೆ ವಿದ್ಯಾರ್ಥಿಗಳ ಕೆಟ್ಟ ವರ್ತನೆಗಳು ಅವರ ಸಾಧನೆಗೆ ಅಡ್ಡಿಯಾಗುತ್ತವೆ. ಶಿಕ್ಷಕರು ನೀಡುವ ಸಲಹೆಗಳನ್ನು ವಿದ್ಯಾರ್ಥಿಗಳು ಕಿವಿಗೊಟ್ಟು ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಈ ಕುರಿತಾಗಿ ಪಾಲಕರು ಕೂಡ ಜಾಗೃತರಾಗಿರಬೇಕು” ಎಂದು ಹೇಳಿದರು.
ಆಡಳಿತಾಧಿಕಾರಿಗಳಾದ ಶ್ರೀ ಎಂ.ಸಿ. ಹಿರೇಮಠ ಮಾತನಾಡುತ್ತಾ, “ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ನೀಡುವುದನ್ನು ತಪ್ಪಿಸಿ, ಶಿಸ್ತಿನ ಜೀವನಕ್ಕೆ ಮಾರ್ಗದರ್ಶನ ನೀಡಬೇಕು. ಇಂದಿನ ಕಾಲದಲ್ಲಿ ತಂತ್ರಜ್ಞಾನ ಅವಶ್ಯಕವಾದರೂ ಅದರ ಅತಿಯಾದ ಬಳಕೆ ಮಕ್ಕಳ ಭವಿಷ್ಯಕ್ಕೆ ಹಾನಿಕಾರಕ. ಪಾಲಕರು ಮಕ್ಕಳೊಂದಿಗೆ ನಿಯಮಿತ ಸಂವಾದ ನಡೆಸಬೇಕು” ಎಂದು ಸಲಹೆ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ಪ್ರೊ. ಪುನೀತ್ ದೇಶಪಾಂಡೆ ಮಾತನಾಡುತ್ತಾ, “ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ನೂರಾರು ವೃತ್ತಿ ಆಯ್ಕೆಗಳಿವೆ. ನಮ್ಮ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಸಂಸ್ಥೆಯ ಚೇರ್ಮನ್‌ರಾದ ಪ್ರೊ. ರಾಜೇಶ್ ಕುಲಕರ್ಣಿ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್ ಹಾಗೂ ಪ್ರೊ. ಸೈಯದ್ ಮತೀನ್ ಮುಲ್ಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ಹೆಚ್.ಎಸ್. ದಳವಾಯಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ಸಂಗೀತಾ ಬೀಳಗಿ ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಪಾಲಕರಿಗೆ ಮುಕ್ತ ಚರ್ಚೆಗೆ ಅವಕಾಶ ನೀಡಿ, ಅವರ ಅಮೂಲ್ಯ ಸಲಹೆ–ಸೂಚನೆಗಳನ್ನು ಸ್ವೀಕರಿಸಲಾಯಿತು.
ಈ ಪಾಲಕರ ಸಭೆಯು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಮಾರ್ಗದರ್ಶಕವಾಗುವಂತಹ ಚಿಂತನೆಗಳ ವೇದಿಕೆಯಾಯಿತು.
