Headlines

ಪಂಚಮಸಾಲಿ ಸಮಾಜದ ರಾಜಕೀಯ ಕದನ! “ಪೇಡ್ ಗಿರಾಕಿಗಳು! ಲಾಭಾರ್ಥಿಗಳು!” – ಸಿ.ಸಿ. ಪಾಟೀಲ ಕಿಡಿ..

ಗದಗ: ಏಪ್ರಿಲ್ 12:
ಪಂಚಮಸಾಲಿ ಪೀಠದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ತೀವ್ರ ತಾಪಮಾನಕ್ಕೆ ತಲುಪಿದಂತೆ ತೋರುತ್ತಿವೆ. ರಾಜಕೀಯ ನಾಯಕರು ಮತ್ತು ಧಾರ್ಮಿಕ ಪೀಠದ ನಡುವಿನ ಸಂಬಂಧವು ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, ಇದೀಗ ಮಾಜಿ ಸಚಿವ ಸಿ.ಸಿ. ಪಾಟೀಲ ಮಾಡಿರುವ ತೀವ್ರ ಟೀಕೆಗಳೇ ಇದರ ನಿದರ್ಶನವಾಗಿದೆ.

ಹೌದು,‌ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿ ಏರ್ಪಡಿಸಿದ ಮಾತನಾಡಿದ ಅವರು, “ಪಂಚಮಸಾಲಿ ನಾಯಕರೆಂದು ಹೇಳಿಸಿಕೊಂಡು ಹರಟೆ ಹೊಡೆಯುತ್ತಿರುವವರಲ್ಲಿ ಮುರುಗೇಶ ನಿರಾಣಿ ಹೊರತುಪಡಿಸಿ ಯಾರಿಗೂ ನೈತಿಕ ಅರ್ಹತೆ ಇಲ್ಲ. ಅವರೆಲ್ಲ “ಲಾಭಾರ್ಥಿಗಳು, ಪೇಡ್ ಗಿರಾಕಿಗಳು” ಎಂದು ಕಿಡಿಕಾರಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳನ್ನ ವಿರೋಧಿಸಲು ಹುಬ್ಬಳ್ಳಿಯಲ್ಲಿ ಸೇರಿದ್ದ ಪಂಚಮಸಾಲಿ ಸಮಾಜದ ನಾಯಕರ ಕುರಿತು ಸಿ.ಸಿ.ಪಾಟೀಲ ಕಿಡಿಕಾರಿದ್ದಾರೆ.

ಸಿ.ಸಿ.ಪಾಟೀಲ ಅವರ ಪ್ರಕಾರ, “ನಿರಾಣಿ ಅವರು ತಮ್ಮ ತನು- ಮನ- ಧನವನ್ನು ಸಮರ್ಪಿಸಿದವರು. ಆದರೆ ಇನ್ನುಳಿದವರು ಎದೆ ಮುಟ್ಟಿಕೊಂಡು ಕೇಳಿಕೊಳ್ಳಲಿ – ಸಮಾಜದ ನೆರವಿಗೆ 10 ರೂ. ನೀಡಿದ ಇತಿಹಾಸವಿದೆಯಾ?” ಎಂಬಷ್ಟು ಗಂಭೀರ ಪ್ರಶ್ನೆಗಳನ್ನು ಇಳಿಸಿದರು.

“ಶ್ರೀಗಳ ಹಿಂದಿನ ಕಾರು ನಿರಾಣಿ ಮತ್ತು ವಿನಯ ಕುಲಕರ್ಣಿ ಕೊಟ್ಟವರು. ಇಂದಿನ ಕಾರಿಗೆ ನಾನು ಸೇರಿ ಹಲವರು ಹಣ ಸಂಗ್ರಹಿಸಿ ಕೊಟ್ಟಿದ್ದೇವೆ. ಅವರು ತಮಗಾಗಿ ಅಲ್ಲ, ಸಮಾಜಕ್ಕಾಗಿ ಬದುಕುತ್ತಿದ್ದಾರೆ” ಎಂದು ಶ್ರೀಗಳ ಪರ ಹಿರಿದಾಗಿ ನಿಂತರು.

ಚನ್ನಮ್ಮಳ ಹಿನ್ನಲೆಯಲ್ಲಿ ಪಾಟೀಲ ಭಾವನಾತ್ಮಕ ಹೊಡೆತವನ್ನೂ ನೀಡಿದರು: “ನಾವು ಚನ್ನಮ್ಮನ ವಂಶಸ್ಥರು. ಹಿಂದೊಮ್ಮೆ ಬೇರೆ ಸಮಾಜದವರು ಅವರನ್ನು ಹಾಳು ಮಾಡಿದ್ದರು. ಇಂದು ನಮ್ಮದೇ ಸಮಾಜದವರು ನಮ್ಮನ್ನು ಒಡೆಯಲು ಯತ್ನಿಸುತ್ತಿದ್ದಾರೆ – ಇದು ಬೇಡ.”

ಪಾಟೀಲ ಅವರು ಮತ್ತೊಂದು ಕುತೂಹಲ ಹುಟ್ಟಿಸುವ ವಿಷಯವನ್ನೂ ಬಿಚ್ಚಿಟ್ಟರು: “2003ರಲ್ಲಿ ಟ್ರಸ್ಟ್ ರಚನೆಯಾಗಿದೆ. ಅಧ್ಯಕ್ಷನ ಹುದ್ದೆ 3 ವರ್ಷ ಮೀರಿ ಇರಬಾರದು. ಆದರೆ ಇಂದಿಗೆ ಇಬ್ಬರು – ಪ್ರಭಣ್ಣ ಹುಣಸಿಕಟ್ಟಿ ಹಾಗೂ ವಿಜಯಾನಂದ ಕಾಶಪ್ಪನವರ್ – ತಮ್ಮನ್ನು ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಉಂಟಾಗಿರುವ ಗೊಂದಲದ ಹತ್ತಿರ ನಿಜಕ್ಕೂ ಉತ್ತರ ಬೇಕಾದ ಕಾಲ ಇದು. ಎಂದು ಹೇಳಿದರು.

ಪಾಟೀಲರು ಕೊನೆಗೆ ಮನವಿಯೊಂದನ್ನು ಇಟ್ಟರು: “ನಾನು ಕೂಡಲಸಂಗಮಕ್ಕೂ ಹೋಗುತ್ತೇನೆ, ಹರಿಹರ ಪೀಠಕ್ಕೂ ಹೋಗುತ್ತೇನೆ. ಈ ಎರಡೂ ಪೀಠಗಳು ನಮ್ಮ ಸಮಾಜದ ಎರಡು ಕಣ್ಣುಗಳು. ಯಾವುದೇ ಕಾರಣಕ್ಕೂ ಈ ಪವಿತ್ರತೆ ಹಾಳಾಗಬಾರದು.”

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಮೋಹನ ಮಾಳಶೆಟ್ಟಿ, ವಿಜಯಕುಮಾರ ಗಡ್ಡಿ, ಸಿ.ಕೆ. ಮಾಳಶೆಟ್ಟಿ, ಸಿದ್ದು ಪಲ್ಲೇದ, ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ, ಆರ್,ಬಿ. ದಾನಪ್ಪಗೌಡ್ರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಮುಖಂಡರಾದ ಎಂ.ಎ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಮಹೇಶ ದಾಸರ, ಶಿವು ಹಿರೇಮನಿ ಪಾಟೀಲ, ಪ್ರಶಾಂತ ನಾಯ್ಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *