ಗದಗ: ಬೆಳಗಾವಿಯಲ್ಲಿ ಪಂಚಮಸಾಲಿ ೨ಎ ಮೀಸಲಾತಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಹಿನ್ನೆಲೆ, ಗದಗನಲ್ಲಿಯೂ ಪಂಚಮಸಾಲಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜನರಲ್ ಕಾರ್ಯಪ್ಪ ವೃತ್ತದ (ಹಳೇ ಡಿಸಿ ಆಫೀಸ್) ಬಳಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುವ ವೇಳೆ ಹೈಡ್ರಾಮಾವೇ ನಡೆದು ಹೋಯಿತು.
ಪ್ರತಿಭಟನಾಕಾರರು ಸರ್ಕಲ್ ಬಂದ್ ಮಾಡಿ, ರಸ್ತೆ ತಡೆ ನಡೆಸಿ,ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಟೈಯರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಉಂಟಾಯಿತು. ಜೊತೆಗೆ ತಳ್ಳಾಟ, ನೂಕಾಟವೂ ಏರ್ಪಟ್ಟಿತು.
ಕೊನೆಗೂ ಪಟ್ಟು ಬಿಡದ ಪ್ರತಿಭಟನಕಾರರು ಟೈಯರ್ ಗೆ ಬೆಂಕಿ ಹಚ್ಚಿದರು.ಇದೇ ವೇಳೆ ಪ್ರತಿಭಟನಾಕಾರನೊಬ್ಬ ಸಿಎಂ ಸಿದ್ಧರಾಮಯ್ಯ ಭಾವಚಿತ್ರ ಹಿಡಿದುಕೊಂಡು ಬಾಯಿ ಬಡಿದುಕೊಳ್ಳುತ್ತಾ ಸಿಎಂ ಭಾವಚಿತ್ರವನ್ನ ಬೆಂಕಿ ಹಚ್ಚಿದ್ದ ಟೈಯರ್ ನಲ್ಲಿ ಹಾಕಿ ತನ್ನ ಆಕ್ರೋಶ ಹೊರಹಾಕಿದನು.
ಇದನ್ನ ಆರಿಸಲು ಪೊಲೀಸರು ಮುಂದಾದಾಗ,ಇದಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರಿಬ್ಬರ ಕಾಲಿಗೆ ಬೆಂಕಿ ಹತ್ತಿಗೊಂಡಿತು.
ತಕ್ಷಣ ಪೊಲೀಸರು ಪ್ರತಿಭಟನಾಕಾರರ ಕಾಲಿಗೆ ಹತ್ತಿದ್ದ ಬೆಂಕಿಯನ್ನ ನಂದಿಸಿದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿದೇ, ಸ್ವಲ್ಪದರಲ್ಲೇ ಪಾರಾದ ಘಟನೆ ನಡೆಯಿತು.
ಪಂಚಮಸಾಲಿ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಗಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಕೊನೆಗೆ ಟೈಯರ್ ಗೆ ಹಚ್ಚಿದ್ದ ಬೆಂಕಿ ನಂದಿಸಿ, ಪ್ರತಿಭಟನೆಯ ಬಿಗುವಿನ ಪರಿಸ್ಥಿತಿಯನ್ನ ಪೊಲೀಸರು ಹರಸಾಹಸ ಪಟ್ಟು ನಿಯಂತ್ರಿಸಿದರು.