ಗದಗ, ಮೇ 18:
ನಗರದ ತಹಶೀಲ್ದಾರ್ ಕಚೇರಿಯಲ್ಲೊಂದು ಅಧಿಕಾರಿಗಳ ದುರ್ವರ್ತನೆಗೆ (ಗೂಂಡಾಗಿರಿ) ಸಾಕ್ಷೀಕರಿಸುವಂಥ ಘಟನೆ ನಡೆದಿದ್ದು, ನ್ಯಾಯ ಕೇಳಲು ಬಂದ ಯುವಕನೊಬ್ಬನಿಗೆ ಉಪ ತಹಶೀಲ್ದಾರ್ ಹಾಗೂ ಅವರ ಸಂಗಡಿಗರು ಕಚೇರಿಯಲ್ಲೇ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿ ಸಾರ್ವಜನಿಕರ ಮಧ್ಯೆ ತೀವ್ರ ಆಕ್ರೋಶ ಮೂಡಿದೆ.
ಅಕ್ಷಯ್ ಬಳ್ಳೊಳ್ಳಿ ಎಂಬ ಯುವಕನ ಗೆಳೆಯನ ಬೈಕ್ಗೆ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಅವರ ಪರಿಚಯಸ್ಥನ ಕಾರು ಡಿಕ್ಕಿ ಹೊಡೆದ ಘಟನೆ ಕಚೇರಿ ಹತ್ತಿರವೇ ಸಂಭವಿಸಿದೆ. ಘಟನೆಯ ವಿಚಾರಣೆಗಾಗಿ ಮತ್ತು ತಪ್ಪಿದವರನ್ನು ಗುರುತಿಸಲು ಅಕ್ಷಯ್ ತಹಶೀಲ್ದಾರ್ ಕಚೇರಿಗೆ ತೆರಳಿದ್ದನು. ಅಲ್ಲಿ ಕಾರು ಯಾರದು? ಹೆಸರು ತಿಳಿಸಿ ಎಂದು ಕೇಳಿದ ಅಕ್ಷಯ್ನ ಪ್ರಶ್ನೆಗೆ ಕೆರಳಿದ ಉಪ ತಹಶೀಲ್ದಾರ್ ಎಸ್. ಡಿ. ವಾಲ್ಮೀಕಿ ಹಾಗೂ ಅವರ ತಂಡ, ಅಕ್ಷಯ್ ಅನ್ನು ಕಚೇರಿಗೆ ಕರೆಸಿಕೊಂಡು ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಸಾಕ್ಷ್ಯ ಪ್ರಕಾರ, ಕಚೇರಿಯೊಳಗೆಯೇ ಅಕ್ಷಯ್ನ ಮೇಲೆ ಕುರ್ಚಿಯಿಂದ ಹೊಡೆದು ದೌರ್ಜನ್ಯ ನಡೆದಿದೆ. ಈ ಘಟನೆಯಲ್ಲಿ ವಾಲ್ಮೀಕಿ ಜೊತೆ ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಮತ್ತೊಬ್ಬರೂ ಭಾಗಿಯಾಗಿದ್ದರು. ಮೂವರು ಸೇರಿ ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪವಿದೆ.
ಘಟನೆ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಸಾರ್ವಜನಿಕ ಮತ್ತು ನಾಗರಿಕ ಹಕ್ಕು ಹೋರಾಟಗಾರರು ಪೊಲೀಸರು ಹಾಗೂ ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಉಪ ತಹಶೀಲ್ದಾರ್ ಹಾಗೂ ಸಂಬಂಧಪಟ್ಟವರಿಗೆ ತಕ್ಷಣವೇ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಘಟನೆಯ ವಿಡಿಯೋಗಳು ಮತ್ತು ಸಾಕ್ಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಗಂಭೀರ ತಿರುವು ನೀಡಿವೆ. ಇನ್ನು ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಪೊಲೀಸ್ ಅಧಿಕಾರಿಗಳೋರ್ವರು ರಾಜಿ ಸಂಧಾನ ಮಾಡಿದ್ದಾರೆ ಎನ್ನುವುದು ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.ಪ್ರಕರಣದ ಪೂರ್ಣ ವಿವರ, ಪೊಲೀಸ್ ತನಿಖೆ ಹಾಗೂ ಅಧಿಕಾರಿಗಳ ಪ್ರತಿಕ್ರಿಯೆ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಕೋಟ್.
ತಹಸೀಲ್ದಾರ ಕಚೇರಿಯಲ್ಲಿಯೇ ಅಲ್ಲಿನ ಹಿರಿಯ ಅಧಿಕಾರಿಗಳ ಗೂಂಡಾಗಿರಿ ವರ್ತನೆಯನ್ನು ಗಮನಿಸಿದಲ್ಲಿ ನಮ್ಮ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಎಷ್ಟೊಂದು ದಬ್ಬಾಳಿಕೆ ನಡೆಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋಗಳೇ ಸಾಕ್ಷಿಯಾಗಿವೆ. ಡಿಸಿ ಅವರು ಕೂಡಲೇ ತಪ್ಪಿತಸ್ಥರ ಮೇಲೆ ತೆಗೆದುಕೊಳ್ಳಬೇಕು.
ರಾಜು ಖಾನಪ್ಪನವರ.
ಶ್ರೀರಾಮಸೇನೆಯ ರಾಜ್ಯ ಪ್ರಮುಖ.

..