ಲಕ್ಷ್ಮೇಶ್ವರ:ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ನರೇಗಾ ಸಿಬ್ಬಂದಿಯವರ 7 ತಿಂಗಳ ವೇತನ ವಿಳಂಬದ ಹಿನ್ನಲೆ ಲಕ್ಷ್ಮೇಶ್ವರ ತಾಲೂಕ ನರೇಗಾ ಸಿಬ್ಬಂದಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಈ ವೇಳೆ ಮಾತನಾಡಿದ ಫಕ್ಕೀರೇಶ ಮತ್ತು ಮಂಜುನಾಥ ತಳವಾರ ನಾವು ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಮಟ್ಟದಲ್ಲಿ ವಿವಿಧ ಸ್ಥಳಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಭಾಗಿಯಾಗಿದ್ದೇವೆ. ಕರ್ನಾಟಕ ರಾಜ್ಯದಾದ್ಯಂತ 3632 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ ಜಿಲ್ಲಾ ಪಂಚಾಯತ್ ಹಂತದಲ್ಲಿ ಎ.ಡಿ.ಪಿ.ಸಿ. ಡಿ.ಎಂ.ಐ.ಎಸ್. ಡಿ.ಐ.ಇ.ಸಿ. ಜಿಲ್ಲಾ ಅಕೌಂಟ್ ಮ್ಯಾನೇಜರ್, ಅದೇ ರೀತಿ ತಾಲೂಕು ಪಂಚಾಯತ್ ಹಂತದಲ್ಲಿ ತಾಂತ್ರಿಕ ಸಂಯೋಜಕರು, ಎಂ ಐ ಎಸ್ ಸಂಯೋಜಕರು ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರು (ಸಿವಿಲ್, ಕೃಷಿ, ತೋಟಗಾರಿಕೆ, ಅರಣ್ಯ. ರೇಷ್ಮೆ) ಆಡಳಿತ ಸಹಾಯಕರು, ಡಿ ಇ ಓ ಅನುಷ್ಠಾನ ಇಲಾಖೆಯಡಿ ಡಿ.ಇ.ಓ.ಕಂ ಕೋಆರ್ಡಿನೇಟರ್ ಮತ್ತು ಗ್ರಾಮ ಪಂಚಾಯತಿ ಹಂತದಲ್ಲಿ ಬಿ.ಎಫ್.ಟಿ, ಜಿ.ಕೆ.ಎಮ್, ಟಿ.ಆರ್.ಎಮ್ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಕಳೆದ ಜನವರಿ-2025ರ ಮಾಹೆಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿರುವುದಿಲ್ಲ.
ಇದರಿಂದ ಎಲ್ಲಾ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಕಳೆದ 7 ತಿಂಗಳುಗಳಿಂದ ವೇತನ ಪಾವತಿ ಆಗದೇ ಇರುವುದರಿಂದ ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳು, ಪ್ರಯಾಣ ವೆಚ್ಚಗಳು. ಸಾಲಗಳ ಮರುವಾವತಿ, ಇ.ಎಂ.ಐ. ಸೇರಿದಂತೆ ಅನೇಕ ರೀತಿಯ ಖರ್ಚುಗಳನ್ನು ನಿಭಾಯಿಸಲು ತೀವ್ರ ತೊಂದರೆಯುಂಟಾಗಿರುತ್ತದೆ ಎಂದು ತಮ್ಮ ಅಳಲನ್ನು ತೊಡಿಕೊಂಡರು.
ಅಲ್ಲದೇ ಸಕಾಲದಲ್ಲಿ ವೇತನ ಪಾವತಿಯಾಗದೇ ಇರುವುದರಿಂದ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ ಖಾಸಗಿ ಲೇವಾದೇವಿದಾರರಿಂದ ಅನಿವಾರ್ಯವಾಗಿ ಸಾಲ ಮಾಡಿ ಕುಟುಂಬ ನಿರ್ವಹಿಸುವ, ದಿನನಿತ್ಯದ ಆಗು-ಹೋಗುಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಈ ಪರಿಸ್ಥಿತಿಯು ನಮ್ಮ ನೌಕರ ವರ್ಗದವರನ್ನು ತೀವ್ರ ಮುಜುಗರಕ್ಕೆ ತಳ್ಳುತ್ತಿದೆ. ಪ್ರತಿಯೊಬ್ಬ ನರೇಗಾ ನೌಕರರು ಒಂದಲ್ಲಾ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ. ಬರುವ ತಿಂಗಳಲ್ಲಿ ವೇತನ ಪಾವತಿಯಾಗದೇ ಇದ್ದಲ್ಲಿ, ನೌಕರರ ಆರ್ಥಿಕ ಪರಿಸ್ಥಿತಿ ಮನೋಬಲ. ಆತ್ಮಸ್ಥೆರ್ಯ ಮತ್ತಷ್ಟು ಕುಸಿಯಲಿದೆ.
ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ನೌಕರರು ಕಳೆದ 7 ತಿಂಗಳುಗಳಿಂದ ವೇತನ ವಿಲ್ಲದೇ ಯಾವ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂಬ ಸ್ಪಷ್ಟ ಚಿತ್ರಣ ತಮಗೆ ಸಿಕ್ಕಿದೆ ಎಂದು ಭಾವಿಸುತ್ತೇವೆ.
ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಾಧಿಕಾರಿಗಳು ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಇಲ್ಲಿಯವರೆಗೂ ಮಾಹಿತಿ ನೀಡುತ್ತಿದ್ದರು ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ನೀಡಿರುತ್ತಾರೆ. ಆದರೇ ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆ ಬಗೆಹರೆಯದೇ ಇರುವುದರಿಂದ ವೇತನ ಪಾವತಿಯು ವಿಳಂಬವಾಗುತ್ತಿದೆ.
ಇನ್ನು ಎರಡು ದಿನಗಳಲ್ಲಿ ವೇತನ ವಾವತಿಯಾಗದಿದ್ದರೆ ಜುಲೈ-7 ರ ಸೋಮವಾರದಿಂದ ನಮ್ಮೆಲ್ಲ ಕೆಲಸ-ಕಾರ್ಯಗಳನ್ನು ನಿಲ್ಲಿಸಿ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಮಾಡಬೇಕೆಂದು ಉಲ್ಲೇಖಿತ ರಾಜ್ಯ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.
ಸಮಸ್ಯೆಗಳನ್ನು ಪರಿಗಣಿಸಿ ಕೂಡಲೇ ನರೇಗಾ ನೌಕರರ ಬಾಕಿ ವೇತನವನ್ನು ಪಾವತಿ ಮಾಡಲು ಅಗತ್ಯ ಕ್ರಮವಹಿಸಲು ಆಗ್ರಹಿಸಿದರು.
ಸಂದರ್ಭದಲ್ಲಿ ಎಸ್.ಕೆ.ಕರನಗೌಡ್ರು, ಎಂ.ಎಚ್.ಪಾಟೀಲ್, ಎಸ್.ಎಸ್.ಪಾಟೀಲ್, ಎಸ್.ವಿ.ಕುಲಕರ್ಣಿ, ಹರೀಶ, ಭಾರತಿ, ಶಿಲ್ಪಾ ಲಮಾಣಿ, ಗಂಗಮ್ಮ ಹರೀಜನ, ಶಿವಕ್ಕ ಮಾದರ, ಪರಮೇಶ ಲಮಾಣಿ, ವಿನೋದಕುಮಾರ ಲಮಾಣಿ, ಗೌರಮ್ಮ ಲಮಾಣಿ, ಭೀಮಪ್ಪ ರಾಠೋಡ ಮಂಜುಳಾ ಕಟ್ಟಿಮನಿ ಇದ್ದರು.