ಗದಗ, ಮೇ 27: ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆ, ಶ್ರದ್ಧೆ ಹಾಗೂ ಸಮರ್ಪಣೆಗೆ ಗೌರವ ಸೂಚಿಸುವಂತೆ, “ಜೀ ಕನ್ನಡ” ವಾಹಿನಿಯ 2025 ರ “ರಿಯಲ್ ಸ್ಟಾರ್” ಪ್ರಶಸ್ತಿಗೆ ಈ ಬಾರಿ ಗದಗದ ಕೀರ್ತಿಶಾಲಿ ಶಿಕ್ಷಣ ತಜ್ಞ ಪ್ರೊ. ಎಸ್.ವೈ. ಚಿಕ್ಕಟ್ಟಿಯವರು ಭಾಜನರಾಗಿದ್ದಾರೆ. ಈ ಗೌರವವು ಕೇವಲ ವ್ಯಕ್ತಿಗತ ಸಾಧನೆಗೆ ಮಾತ್ರವಲ್ಲ, ಶೈಕ್ಷಣಿಕ ಕ್ಷೇತ್ರದ ಮೆರವಣಿಗೆ ಮತ್ತು ಸಮಾಜಮುಖಿ ಶಿಕ್ಷಣದ ಸಾಧನೆಗೆ ನೀಡಲ್ಪಟ್ಟ ಪ್ರತಿಷ್ಠಿತ ಪುರಸ್ಕಾರವಾಗಿದೆ.
ಪ್ರೊ. ಚಿಕ್ಕಟ್ಟಿ ಅವರು ಗದಗ ನಗರದಲ್ಲಿ ಸ್ಥಾಪಿಸಿದ “ಚಿಕ್ಕಟ್ಟಿ ಸಮೂಕಹ ಶಿಕ್ಷಣ ಸಂಸ್ಥೆ” ಮೂಲಕ ಸಹಸ್ರಾರು ಮಕ್ಕಳಿಗೆ ಉನ್ನತಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಕ್ರಾಂತಿಕಾರಕ ಪಾತ್ರವಹಿಸಿದ್ದಾರೆ. “ಅಂದು ಮುದ್ರಣ ಕಾಶಿಗೆ ಬಂದು, ಇಂದು ವಿದ್ಯಾ ಕಾಶಿಯನ್ನಾಗಿಸಿದವರು” ಎಂಬ ಮಾತುಗಳು ಅವರ ಶೈಕ್ಷಣಿಕ ಪಯಣದ ಸಾರ್ಥಕ ಸಾರಾಂಶವೇ ಆಗಿವೆ.
ಅಕ್ಷರವ ಬಯಸಿ ಬಂದ ಮಕ್ಕಳಿಗೆ ಅಕ್ಷರದ ಬೀಜವ ಬಿತ್ತಿದವರು, ಶಿಷ್ಯರ ಬುದ್ಧಿಯಲ್ಲಿ ಜ್ಞಾನವನ್ನೂ, ಮನದಲ್ಲಿ ಆಶೆಯ ದೀಪವನ್ನೂ ಬೆಳಗಿಸಿರುವವರು ಪ್ರೊ. ಚಿಕ್ಕಟ್ಟಿ. ಅವರು ಶಿಕ್ಷಣವನ್ನು ಕೇವಲ ಪಾಠ ಪುಸ್ತಕ ಅಕ್ಷರಗಳಲ್ಲ, ಬದುಕಿಗೆ ಮಾರ್ಗದರ್ಶಕವಾಗುವ ಬುದ್ಧಿವಂತಿಕೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ರೂಪದಲ್ಲಿ ನಿರ್ವಹಿಸುತ್ತಿದ್ದಾರೆ. ವಿದ್ಯಾಲಯ ಸಂಸತ್ತನ್ನು ಕಟ್ಟಿದವರು, ಸುಜ್ಞಾನ ಸಂಪತ್ತನ್ನು ಸಮಾಜಕ್ಕೆ ನೀಡಿದವರು ಅವರು.
ಬಾಹ್ಯ ಜ್ಞಾನವನ್ನಷ್ಟೇ ಕಲಿಸದೆ, ಅಂತರ್ದೃಷ್ಟಿಯ ಬೆಳವಣಿಗೆಯತ್ತ ಶಿಷ್ಯರನ್ನು ಒಲೈಸಿ, ಪುಸ್ತಕದಲ್ಲಿರುವ ವಿಷಯವನ್ನು ಶಿಷ್ಯರ ಮಸ್ತಕದಲ್ಲಿ ಚಿರಸ್ಥಾಯಿಯಾಗಿ ಅಳವಡಿಸಿದ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ.
ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಪ್ರೊ. ಚಿಕ್ಕಟ್ಟಿ, “ಇದು ನನ್ನ ವೈಯಕ್ತಿಕ ಸಾಧನೆಯಂತಿಲ್ಲ. ನನ್ನ ಶಿಕ್ಷಕರ, ವಿದ್ಯಾರ್ಥಿಗಳ, ಹಾಗೂ ಈ ಸಂಸ್ಥೆಗೆ ಬೆನ್ನೆಲೆಯಾದ ಎಲ್ಲರ ಪರಿಶ್ರಮ ಮತ್ತು ಪ್ರೀತಿಯ ಫಲವಿದು”ಎಂದು ವಿನಮ್ರವಾಗಿ ಹೇಳಿಕೊಂಡರು.
ಶಿಕ್ಷಣದ ಮೂಲಕ ಸಮಾಜಮುಖಿ ಬದಲಾವಣೆಗೆ ಜೀವಪೂರಿತ ಶ್ರಮ ನೀಡಿದ ಪ್ರೊ. ಎಸ್.ವೈ. ಚಿಕ್ಕಟ್ಟಿಯವರ ಸಾಧನೆಗೆ ‘ಜೀ ಕನ್ನಡ’ವಾಹಿನಿಯ ಈ ಪ್ರಶಸ್ತಿ ತಕ್ಕಾದ ಗೌರವವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಈ ಪ್ರಶಸ್ತಿ ಅವರು ಮುಂದಿನ ತಲೆಮಾರಿಗೆ ಸಹ ಪ್ರೇರಣೆಯ ಮೂಲವಾಗಲಿ ಎಂಬ ಆಶಯವನ್ನು ಅವರ ಶಿಷ್ಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರುವ ಮೂಲಕ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಶಸ್ತಿ ವಿತರಣಾ ಅದ್ಧೂರಿ ಸಮಾರಂಭವು ಮೇ.28 ರ ಬುಧವಾರದಂದು ಬೆಂಗಳೂರಿನ ದಿ ಲಲಿತ್ ಅಶೋಕ್ ನ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಅದ್ಧೂರಿಯಾಗಿ ನಡೆಯಲಿದೆ.ಸಮಾರಂಭದಲ್ಲಿ ರಾಜ್ಯದ ರಾಜಕೀಯ ಗಣ್ಯರು ಹಾಗೂ ಕನ್ನಡ ಚಿತ್ರರಂಗದ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ.
