ಗದಗ, ಜೂನ್ 3 – ಗದಗ ತಾಲೂಕಿನ ಲಕ್ಕುಂಡಿ ಗ್ರಾಮಕ್ಕೆ ಇಂದು ಸಿಎಂ ಸಿದ್ಧರಾಮಯ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ತಮ್ಮ ಕ್ರೀಡಾಸಕ್ತಿ ಮಾತುಗಳನ್ನಾಡಿ, ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ ನೀಡಿದರು.
ಈ ವೇಳೆ ಐಪಿಎಲ್ ಟೂರ್ನಿಯ ಕುರಿತಾಗಿ ಮಾತನಾಡಿದ ಸಿಎಂ, “ಆರ್ಸಿಬಿ ನಮ್ಮ ಬೆಂಗಳೂರು ತಂಡ. ಈ ಬಾರಿ ಅವರು ಚೆನ್ನಾಗಿ ಆಡುತ್ತಿದ್ದಾರೆ. ಅವರ ಗೆಲುವಿಗೆ ನನ್ನ ಸಂಪೂರ್ಣ ಬೆಂಬಲವಿದೆ,” ಎಂದು ಸ್ಪಷ್ಟವಾಗಿ ತಿಳಿಸಿದರು.
ಸಿಎಂ ಮಾತನಾಡಿದ ಸಂದರ್ಭ, ಐಪಿಎಲ್ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಗಳಿಸಿದ ವಿಷಯ ಪ್ರಸ್ತಾಪವಾಗಿ, “ಪಂಜಾಬ್ ಒಳ್ಳೆಯ ಆಟವಾಡುತ್ತಿದೆ, ಅವರು ಮುಂಬೈ ವಿರುದ್ಧ ಗೆದ್ದಿದ್ದಾರೆ. ಆದರೆ, ಇದೇ ಪಂಜಾಬ್ ತಂಡ ಆರ್ಸಿಬಿ ವಿರುದ್ಧ ಕೇವಲ 101 ರನ್ಗಳಿಗೆ ಆಲೌಟ್ ಆಗಿತ್ತು ಎಂಬುದು ಗಮನಾರ್ಹ,” ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಂದುವರೆದು, “ಆರ್ಸಿಬಿ ಗೆದ್ದರೆ ನಾವೆಲ್ಲ ಖುಷಿಪಡೋಣ. ನಮ್ಮ ರಾಜ್ಯದ ತಂಡ ಗೆಲ್ಲೋದು ನಮಗೆ ಗೌರವ ಮತ್ತು ಹೆಮ್ಮೆ. ಪಂಜಾಬ್ ಗೆದ್ದರೂ ಅವರಿಗೆ ಶುಭಾಶಯಗಳು. ಆದರೆ ನನ್ನ ಹೃದಯ ಯಾವತ್ತೂ ಆರ್ಸಿಬಿಯೊಂದಿಗೇ ಇದೆ,” ಎಂದು ಹೇಳಿದರು.ಹೀಗೆ ಹೇಳುತ್ತಲೇ, ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಹಾಗೂ ಯುವಕರು ಸಿಳ್ಳೆ, ಕೇಕೆ ಹಾಕುವ ಮೂಲಕ ಸಿಎಂ ಹೇಳಿಕೆಯನ್ನ ಸಂಭ್ರಮಿಸಿದರು.
ಈ ಹೇಳಿಕೆಯಿಂದ ಆರ್ಸಿಬಿ ಅಭಿಮಾನಿಗಳಲ್ಲಿ ಹೊಸ ಆಶಾವಾದ ಮೂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲವು ತಂಡದ ಆಟಗಾರರಿಗೆ ಉತ್ಸಾಹ ನೀಡಲಿದೆ ಎನ್ನಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಜನರಲ್ಲಿ ಕ್ರಿಕೆಟ್ನ ಪ್ರತಿಷ್ಠಿತ ಐಪಿಎಲ್ ಪಂದ್ಯಾವಳಿಯ ಕುರಿತಾಗಿ ದೊಡ್ಡ ಆಸಕ್ತಿ ಕಾಣಿಸಿಕೊಂಡಿದ್ದು, ಸಿಎಂನವರ ಈ ಹೇಳಿಕೆ ಅವರು ಕೂಡ ಆಟದ ಪ್ರತಿ ತುದಿಗೆ ಹತ್ತಿರದಿಂದ ಗಮನಿಸುತ್ತಿರುವುದನ್ನು ತೋರಿಸುತ್ತದೆ.