ಮುಂಡರಗಿ:
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್.ಎಸ್. ಪಾಟೀಲ್ ನಗರದಲ್ಲಿ ವೈಯಕ್ತಿಕ ಜಗಳದ ಹಿನ್ನೆಲೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
🖋ವರದಿ: ಮಹಲಿಂಗೇಶ ಹಿರೇಮಠ.ಗದಗ
ಕುಟುಂಬದೊಳಗಿನ ಮನಸ್ತಾಪ ತೀವ್ರಗೊಂಡ ಹಿನ್ನೆಲೆಯಲ್ಲಿ ಅಕಸ್ಮಾತ್ ನಡೆದ ಹೊಡೆದಾಟವೇ ಸಾವಿಗೆ ಕಾರಣ ಎನ್ನಲಾಗಿದೆ. ಮೃತ ಯುವಕನನ್ನು ಎಸ್.ಎಸ್. ಪಾಟೀಲ್ ನಗರ ನಿವಾಸಿ ವಸಂತ ಭಜಂತ್ರಿ (26) ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಮೃತನ ಅಕ್ಕ ಶ್ರೀಮತಿ ಮಂಜವ್ವ ಭಜಂತ್ರಿ ಹಾಗೂ ಆಕೆಯ ಪುತ್ರ ಶ್ರೀಕಾಂತ ಭಜಂತ್ರಿ ಆರೋಪಿತರಾಗಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ವಸಂತ ಭಜಂತ್ರಿ ಕೆಲಸಕ್ಕೆ ತೆರಳದೇ ಮದ್ಯಪಾನಕ್ಕೆ ಅಂಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ದಿನನಿತ್ಯ ಮನೆಯವರೊಂದಿಗೆ ತಂಟೆ ಮಾಡುತ್ತಿದ್ದನೆಂಬ ಆರೋಪವಿದೆ. ಇದೇ ಕಾರಣದಿಂದ ಕುಟುಂಬದೊಳಗೆ ಜಗಳ ಉಂಟಾಗಿ, ಮಾತಿನ ಚಕಮಕಿ ತೀವ್ರಗೊಂಡು ಅಕಸ್ಮಾತ್ ನಡೆದ ಹೊಡೆದಾಟದಲ್ಲಿ ವಸಂತ ಭಜಂತ್ರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮಾರಕಾಸ್ತ್ರ ಬಳಸಿ ಯುವಕನ ಮೇಲೆ ಹಲ್ಲೆ ಮಾಡಿದ್ದರಿಂದ, ಮೃತ ಯುವಕನ ಕುತ್ತಿಗೆಗೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾನೆ. ತಕ್ಷಣ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದರೂ ವಸಂತ ಭಜಂತ್ರಿ ಸ್ಥಳದಲ್ಲೇ ಸಾವಿಗಿಡಾಗಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ.
ಘಟನೆಯ ಸಂಬಂಧ ಆರೋಪಿತರನ್ನು ಬಂಧಿಸಲಾಗಿದ್ದು, ಮಾಹಿತಿ ದೊರಕಿದ ತಕ್ಷಣ ಗದಗ ಎಸ್ಪಿ ರೋಹನ್ ಜಗದೀಶ ಹಾಗೂ ನರಗುಂದ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತ ಮುಂಡರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮೃತನ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.
ವೈಯಕ್ತಿಕ ಕಲಹದಿಂದ ಸಂಭವಿಸಿದ ಘಟನೆ ಎನ್ನಲಾಗುತ್ತಿದ್ದು, ಸಾರ್ವಜನಿಕ ಶಾಂತಿಗೆ ಯಾವುದೇ ಧಕ್ಕೆಯಾಗದಂತೆ ಪೊಲೀಸರು ನಿಗಾವಹಿಸಿದ್ದು,ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
