ಮುಂಡರಗಿ: ಕನ್ನಡ ನಾಡಿಗೆ “ಬಸವಣ್ಣ” ಎಂದರೆ ಮಹಾಕಳಶವಿದ್ದಂತೆ. ಬಸವಣ್ಣನನ್ನ ನೆನೆಯದ ಉಸಿರಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.ಅಂತಹ ಮಹಾಪುರುಷನನ್ನ ವಿದೇಶದ ನೆಲದಲ್ಲಿ ಇಟ್ಟು ಪೂಜಿಸುತ್ತಿದೆ ನಮ್ಮ ಭಾರತ.
ಕರ್ನಾಟಕ ಸರ್ಕಾರ ಜಗಜ್ಯೋತಿ ಬಸವೇಶ್ವರನನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಲ್ಲದೇ, ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರವನ್ನ ಕಡ್ಡಾಯವಾಗಿ ಹಾಕುವಂತೆ ಆದೇಶ ಹೊರಡಿಸಿದೆ. ಅಷ್ಟೇ ಯಾಕೆ, ಅನುಭವ ಮಂಟಪದ ಹರಿಕಾರನನ್ನ, ಸರ್ಕಾರದ ನಡೆಸುವ ಕೇಂದ್ರಸ್ಥಾನ ವಿಧಾನಸೌಧ ಹಾಗೂ ಸುವರ್ಣಸೌಧದಲ್ಲಿ ಬಸವೇಶ್ವರರ ಭಾವಚಿತ್ರಗಳು ರಾರಾಜಿಸುತ್ತಿವೆ. ಆ ಮೂಲಕ ಸಮಾನತೆ ತಂದುಕೊಟ್ಟ ಪುಣ್ಯಾತ್ಮನಿಗೆ ಮುಗಿಲೆತ್ತರದ ಗೌರವವನ್ನ ನಮ್ಮ ನಾಡು ಸಲ್ಲಿಸುತ್ತಲೇ ಇದೆ.

ಆದರೆ ಸರ್ಕಾರದ ಅಧಿನದಲ್ಲಿ ಕೆಲಸ ಮಾಡುವ ಆಡಳಿತ ಮಂಡಳಿ, ಸಿಬ್ಬಂದಿಗಳು ಮಾಡುವ ನಿರ್ಲಕ್ಷ್ಯ ಎಂಥಹವರನ್ನೂ ಅಪಮಾನಕ್ಕೀಡು ಮಾಡುತ್ತವೆ ಅನ್ನೋದಕ್ಕೆ ಮುಂಡರಗಿ ಪುರಸಭೆಯ ಬೇಜವಾಬ್ದಾರಿಯೇ ಸಾಕ್ಷಿ.
ಅಪ್ರತಿಮ ನಾಯಕ ಬಸವಣ್ಣನ ಭಾವಚಿತ್ರವನ್ನ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಪುರಸಭೆ ಯಾವ ಸ್ಥಳದಲ್ಲಿ ಇಟ್ಟಿದೆಯೆಂದು ನೀವೆ ನೋಡಿ! ಶೌಚಾಲಯ ಹಾಗೂ ಕಸದ ಟ್ರ್ಯಾಕ್ಟರ್ ಮಧ್ಯೆ ಗುಜರಿ ಸಾಮಾನುಗಳ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ “ಬಸವೇಶ್ವರ” ಭಾವಚಿತ್ರ ಇಟ್ಟು, ಪುರಸಭೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ತಮ್ಮ ಬೇಜವಾಬ್ದಾರಿತನದ ಪರಮಾವಧಿಯನ್ನ ಪ್ರದರ್ಶಿಸಿದೆ.
ಅತ್ಯಂತ ಈ ಕೆಟ್ಟ ದೃಶ್ಯವನ್ನ ಸ್ವತಃ ಪುರಸಭೆಗೆ ತೆರಳಿದ ಸಾರ್ವಜನಿಕರೇ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಪುರಸಭೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಹಾಗೂ ನಿಷ್ಕಾಳಜಿಯನ್ನ ಸಾರಾಸಗಟವಾಗಿ ಎತ್ತಿ ತೋರಿಸುತ್ತಿದೆ.
ಬಸವಣ್ಣ ಕೇವಲ ಪೂಜಿಸುವದಕ್ಕಲ್ಲಷ್ಟೇ ಅಲ್ಲ, ಅವರು ಹಾಕಿಕೊಟ್ಟ ಕಾಯಕದ ದಾರಿ, ಸಮಾನತೆ, ಶಿಸ್ತು, ಗೌರವ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಂದಾಗ ಮಾತ್ರ ನೀವು ನಿಮ್ಮ ಸರ್ಕಾರಿ ಕಚೇರಿಗಳಲ್ಲಿ ಮಹಾಪುರುಷನ ಭಾವಚಿತ್ರ ಹಾಕಿದ್ದಕ್ಕೂ ಸಾರ್ಥಕತೆ ತಂದುಕೊಟ್ಟಂತೆ ಅನ್ನೋದನ್ನ ಅಧಿಕಾರಿವರ್ಗ ಅರಿಯಬೇಕು ಎಂದು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
ಕಣ್ತಪ್ಪಿನಿಂದ, ನಜರಚುಕ್ಕಿನಿಂದ ಆಗಿದ್ದು ಎಂದು ಕಾರಣ ಒಡ್ಡಿ ನಿಮ್ಮಿಂದಾಗಿರುವ ತಪ್ಪಿನಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದರೂ, “ತಪ್ಪು ತಪ್ಪೇ!” ಎಂದು ಸಾರ್ವಜನಿಕರು ಪುರಸಭೆ ಆಡಳಿತ ಮಂಡಳಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವರ್ಗ, ವರ್ಣ, ಲಿಂಗ ಸೇರಿ ದಂತೆ ಸರ್ವ ಸಮಾನತೆಗಳ ಪ್ರಜಾಪ್ರಭುತ್ವ ಪರಿಕಲ್ಪನೆಯ ಸಂಸತ್ತನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕಾರ್ಯರೂಪಕ್ಕೆ ತಂದವರು ಬಸವಣ್ಣನವರು. ಅದುವೇ ಅನುಭವ ಮಂಟಪ’. ಅಂಥಹ ಪುಣ್ಯಾತ್ಮನಿಗೆ ಸರ್ಕಾರಿ ಕಚೇರಿಗಳೇ ಈ ರೀತಿ ಅಗೌರವ ತೋರಿಸಿದರೆ ಹೇಗೆ? ಎಂದು ಪಟ್ಟಣದ ಜನತೆ ಪುರಸಭೆ ವಿರುದ್ಧ ಕಿಡಿ ಕಾರಿದ್ದು, ದಿನಬೆಳಗಾದರೆ ಕಚೇರಿಯಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಈ ನಿರ್ಲಕ್ಷ್ಯತೆ ಕಾಣಲಿಲ್ಲವಾ? ಅಥವಾ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತರಾ?.ಹೀಗಾಗಿ ಇಂಥಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪಟ್ಟಣದ ಸಾರ್ವಜನಿಕರು ಆಗ್ರಹಿಸಿದ್ದಾರೆ.