ಗದಗ.(ಮುಂಡರಗಿ), ನ. 3: ಕೌಟುಂಬಿಕ ಕಲಹದಿಂದ ಬೇಸತ್ತು ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಡೆದಿದೆ.
ಸುಜಾತಾ ಬಿ. (35) ಅನ್ನೋ ಮಹಿಳೆ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ವೇಳೆ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹವೇ ಈ ಅಘಾತಕಾರಿ ನಿರ್ಧಾರದ ಹಿನ್ನೆಲೆ ಎಂದು ತಿಳಿದುಬಂದಿದೆ.
ಸುಜಾತಾ ಅವರು ಮುಂಡರಗಿ ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯ ಬೋಧಿಸುತ್ತಿದ್ದರು. ಕೇವಲ ಮೂರು ತಿಂಗಳ ಹಿಂದಷ್ಟೇ ಅವರು ಎರಡನೇ ವಿವಾಹವಾಗಿದ್ದರು ಎನ್ನಲಾಗಿದೆ.
ನವೆಂಬರ್ 1 ರಂದು ಸುಜಾತಾ ಅವರ ಪತಿ ಮನೆಗೆ ಬಂದು ಹೋಗಿದ್ದಾಗ ದಾಂಪತ್ಯ ಜಗಳ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತಳ ಕುಟುಂಬಸ್ಥರು ಸುಜಾತಾ ಅವರ ಸಾವಿಗೆ ಪತಿಯೇ ಕಾರಣ ಎಂದು ದೂರು ಸಲ್ಲಿಸುವ ಮಾಹಿತಿ ಒದಗಿದೆ.
ಘಟನಾ ಸ್ಥಳಕ್ಕೆ ನರಗುಂದ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಭೇಟಿ ನೀಡಿದ್ದು, ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ಕುಸುಗಲ್ಲ ನೇತೃತ್ವದ ತಂಡ, ಪ್ರಕರಣದ ಸಂಬಂಧ ಮುಂದಿನ ತನಿಖೆ ಮುಂದುವರಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
