ಗದಗ: ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಅಭಿಪ್ರೇರಣಾ ಕಾರ್ಯಕ್ರಮದಲ್ಲಿ “ವಿಶೇಷವಾದ ಜ್ಞಾನ, ಕೌಶಲ್ಯ ಹಾಗೂ ಉತ್ತಮ ನಡತೆ ಉಳ್ಳವರು ಜೀವನದಲ್ಲಿ ಸಾಧಕರಾಗುತ್ತಾರೆ” ಎಂದು ಅಮೇರಿಕಾದಲ್ಲಿನ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಶ್ರೀಮತಿ ಶಿಲ್ಪಾ ಎನ್. ರಾಜೂರ ಅವರು ಹೇಳಿದರು.
ಅಮೇರಿಕಾದ ಡಲ್ಲಾಸ್ನ ಸೊಡೆಕ್ಸೊ ಕಂಪನಿಯಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶಿಲ್ಪಾ ಎನ್. ರಾಜೂರ ಅವರು ಗದಗದವರಾಗಿದ್ದು, ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಗುರುಗಳ ಶಿಷ್ಯಳಾಗಿದ್ದರು. ಅವರು ಅಭಿಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಮೇರಿಕಾದ ಶಿಕ್ಷಣ ಪದ್ಧತಿ ಹಾಗೂ ಭಾರತೀಯ ಶಿಕ್ಷಣ ಪದ್ಧತಿಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿದರು.
ಅಮೇರಿಕಾದಲ್ಲಿ ಶಿಕ್ಷಕರು ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಿಸುವಂತಿಲ್ಲ ಎಂದು ಅವರು ತಿಳಿಸಿ, “ಅಲ್ಲಿ ಮಕ್ಕಳಿಗೆ ತಿಳಿಸಿ ಹೇಳುವ ಮೂಲಕವೇ ಪಾಠ ಕಲಿಸಲಾಗುತ್ತದೆ. ಜ್ಞಾನ, ಕೌಶಲ್ಯ ಮತ್ತು ಉತ್ತಮ ನಡತೆ ಇರುವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಅಲ್ಲಿನ ಶಾಲೆಗಳಲ್ಲಿ ಪಠ್ಯ ವಿಷಯಗಳಿಗಿಂತ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ” ಎಂದರು.
ಅವರು ಮುಂದುವರೆದು, “ಅಮೇರಿಕಾದಲ್ಲಿ ಮಕ್ಕಳಿಗೆ ವೈಜ್ಞಾನಿಕರು, ತತ್ವಜ್ಞಾನಿಗಳು ಹಾಗೂ ಸಾಧಕರ ಪುಸ್ತಕಗಳನ್ನು ಓದುವ ಅವಕಾಶ ನೀಡಲಾಗುತ್ತದೆ. ಅಲ್ಲಿನ ಕಾನೂನು ಕಟ್ಟುನಿಟ್ಟಾಗಿ ಪಾಲಿಸಬೇಕು — ಉಲ್ಲಂಘಿಸಿದರೆ ಶಿಕ್ಷೆಗೆ ಒಳಪಡಬೇಕು. ಮಕ್ಕಳು ಆಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹ ಆರೋಗ್ಯಕರವಾಗುತ್ತದೆ, ಮನಸ್ಸು ಪ್ರಶಾಂತವಾಗಿರುತ್ತದೆ ಮತ್ತು ಓದಿನತ್ತ ಆಸಕ್ತಿ ವೃದ್ಧಿಯಾಗುತ್ತದೆ” ಎಂದು ತಿಳಿಸಿದರು.
ಅವರು ಉದಾಹರಣೆಗಳ ಮೂಲಕ ತಿಳಿಸಿ, “ಮಕ್ಕಳು ಸಣ್ಣಪುಟ್ಟ ತಪ್ಪುಗಳನ್ನು ಮಾಡುವುದೇ ಸಹಜ. ಅವರಿಗೆ ಶಿಕ್ಷೆ ನೀಡದೆ ಸಹನೆ ಮತ್ತು ತಾಳ್ಮೆಯಿಂದ ತಿಳಿಸಬೇಕು. ಹೀಗೆ ಮಾಡಿದಾಗ ಅವರು ತಪ್ಪುಗಳನ್ನು ಅರಿತುಕೊಂಡು ಸುಧಾರಣೆ ಹೊಂದುತ್ತಾರೆ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಹಿತಿ ಶ್ರೀ ಜೆ.ಕೆ. ಜಮಾದಾರ ಗುರುಗಳು ಮಾತನಾಡಿ, “ಮಕ್ಕಳಲ್ಲಿ ಪ್ರೇರಣೆ ಮೂಡಿಸಲು ನಾನು ಬರೆದ ‘ಸುನೀತಿ ಪಥ’ ಎಂಬ ಪುಸ್ತಕದ ಕಥೆಗಳು ಸಹಾಯಕವಾಗಬಹುದು. ಅವುಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಸಾಧಕರಾಗುವರು ಹಾಗೂ ಉತ್ತಮ ಸಂಸ್ಕಾರಿಗಳಾಗುವರು” ಎಂದರು.
ಮಹಿಳೆಯ ಸಾಮರ್ಥ್ಯ ಕುರಿತು ಮಾತನಾಡುತ್ತಾ, “ಮಹಿಳೆ ಮನಸ್ಸು ಮಾಡಿದರೆ ಜೀವ ರಕ್ಷಕಳೂ ಆಗುತ್ತಾಳೆ, ನಿರ್ಲಕ್ಷಿಸಿದರೆ ಜೀವ ಭಕ್ಷಕಳೂ ಆಗುತ್ತಾಳೆ” ಎಂದು ಮನಮುಟ್ಟುವಂತೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಡಿಡಿಪಿಐ ಶ್ರೀ ಎ.ಎನ್. ನಾಗರಳ್ಳಿ ಅವರು, “ವಿದ್ಯಾರ್ಥಿಗಳು ಬೇಸರಪಡದೆ ನಿರಂತರವಾಗಿ ಅಧ್ಯಯನ ಮಾಡಿದರೆ ತಮ್ಮ ಬಯಸಿದ ಜೀವನವನ್ನು ಸಾಧಿಸಬಹುದು. ಸೋಲು ಎಂದರೆ ಅಂತ್ಯವಲ್ಲ; ಅದು ಮುಂದಿನ ಗೆಲುವಿಗೆ ಮೆಟ್ಟಿಲು. ಏಕಾಗ್ರತೆ, ನಿಯಮಿತ ಅಧ್ಯಯನ ಹಾಗೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ” ಎಂದು ಹೇಳಿದರು.
ಅವರು ಆಹಾರ ಪದ್ಧತಿಯ ಕುರಿತು ಉಲ್ಲೇಖಿಸಿ, “ಇಂದಿನ ಮಕ್ಕಳು ಜಂಕ್ಫುಡ್ ಸೇವನೆ ಮಾಡುತ್ತಿರುವುದರಿಂದ ಶಕ್ತಿಯುತ ಆಹಾರವಿಲ್ಲದೆ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ. ಜೋಳ, ರಾಗಿ, ನವಣೆಯಿಂದ ತಯಾರಿಸಿದ ಆಹಾರ ಸೇವನೆಯಿಂದ ಶಕ್ತಿವಂತರಾಗಬಹುದು” ಎಂದು ಹೇಳಿದರು. “ಅಮೇರಿಕಾ ಹಾಗೂ ಭಾರತದ ಶಿಕ್ಷಣ ಪದ್ಧತಿಗಳಲ್ಲಿ ಬಹು ವ್ಯತ್ಯಾಸವಿಲ್ಲ. ಆದರೆ ಅಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ; ನಮ್ಮಲ್ಲಿ ಹೆಚ್ಚಾಗಿದೆ. ಆದರೂ ಜಾಣತನದಲ್ಲಿ ಭಾರತೀಯರು ಯಾವುದೇ ರೀತಿಯಲ್ಲೂ ಹಿಂದುಳಿದವರಲ್ಲ” ಎಂದರು.
ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಅವರು ಮಾತನಾಡಿ, “ಶಾಲೆಗಳಲ್ಲಿ ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ. ಸಾಹಿತಿ ಜೆ.ಕೆ. ಜಮಾದಾರರ ‘ಸುನೀತಿ ಪಥ’ ನಿತಿ ಕಥೆಗಳು ಮಕ್ಕಳಲ್ಲಿ ಸಂಸ್ಕಾರ ಬೆಳೆಸುತ್ತವೆ. ಅಮೇರಿಕಾದಲ್ಲಿ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಸೀಟುಗಳಿಗೆ ಕೇವಲ ಅಂಕಗಳ ಆಧಾರದಲ್ಲೇ ಅಲ್ಲ, ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದು ಸಂತೋಷಕರ ವಿಚಾರ. ಅಂತಹ ವ್ಯವಸ್ಥೆ ನಮ್ಮ ದೇಶದಲ್ಲಿಯೂ ಬರಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀಮತಿ ಶಿಲ್ಪಾ ಎನ್. ರಾಜೂರ ಹಾಗೂ ಅವರ ಪೋಷಕರಾದ ಶ್ರೀ ಮೋಹನ್ ಟಿ. ಕೋಟಿಯವರು (ಅಧ್ಯಕ್ಷರು, ಲಿಬರಲ್ ಸಹಕಾರಿ ಬ್ಯಾಂಕ್, ಗದಗ) ಮತ್ತು ಶ್ರೀಮತಿ ಭಾರತಿ ಎಂ. ಕೋಟಿಯವರು (ನಿವೃತ್ತ ಉಪನ್ಯಾಸಕಿ, ಸರಕಾರಿ ಪಿಯು ಕಾಲೇಜು, ಗದಗ) ಇವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮ ಹಿರೇಮಠ (ಹಿ.ಮ.ವಿ.ಪ. ಪೂ. ಕಾಲೇಜು, ಕೂಡ್ಲಗಿ), ಶ್ರೀ ಹನುಮಂತರೆಡ್ಡಿ ಇಟಗಿ (ಬಿಆರ್ಪಿ ಪ್ರೌಢ ವಿಭಾಗ, ಮುಂಡರಗಿ), ಶ್ರೀಮತಿ ವಿಜಯಲಕ್ಷ್ಮೀ ಕೋಟಿ (ಗಜೇಂದ್ರಗಡ), ವಿನಯ್ ಚಿಕ್ಕಟ್ಟಿ, ಐಸಿಎಸ್ಇ ಶಾಲೆಯ ಉಪಪ್ರಾಚಾರ್ಯೆ ಶ್ರೀಮತಿ ಶೋಭಾ ಸ್ಥಾವರಮಠ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಗಣೇಶ ಬಡ್ನಿ ನಿರೂಪಿಸಿದರು. ಪ್ರಾರ್ಥನಾ ಗೀತೆಯನ್ನು ಬಸ್ ಚಾಲಕರಾದ ಶ್ರೀ ಶೇಖರಪ್ಪ ಅಣ್ಣಿಗೇರಿ ಹಾಡಿದರು. ಬಿಸಿಎ ಪದವಿ ಕಾಲೇಜು ಪ್ರಾಚಾರ್ಯರಾದ ಶ್ರೀ ಬಿಪಿನ್ ಎಸ್. ಚಿಕ್ಕಟ್ಟಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿಯರಾದ ತನುಶ್ರೀ, ಪ್ರತೀಕ್ಷಾ, ಶ್ರೇಯಾ, ಸುಪ್ರಿತಾ, ನಯನಾ ಹಾಗೂ ಅಪೂರ್ವಾ ನೀಡಿದರು. ಕೊನೆಯಲ್ಲಿ ಶಿಕ್ಷಕಿಯರಾದ ಶ್ರೀಮತಿ ರಜನಿ ಕುರಿಯವರು ವಂದನಾರ್ಪಣೆ ಸಲ್ಲಿಸಿದರು.
