ಧಾರವಾಡ: ಹಣ ಮತ್ತು ಅಕ್ರಮ ಸಂಬಂಧಕ್ಕೆ ಮಾರುಹೋಗಿ ಹೆತ್ತ ತಾಯಿಂದಿರೇ ತಮ್ಮ ಕರುಳ ಬಳ್ಳಿಗಳನ್ನ ಕಿಡ್ನಾಪ್ ಮಾಡಿರೋ ಅಮಾನವೀಯ ಘಟನೆ ಧಾರವಾಡದಲ್ಲಿ ನಡೆದಿದೆ.ಮಕ್ಕಳನ್ನ ಹಾಸ್ಟೆಲ್ಗೆ ಸೇರಿಸೋಕೆ ಹೋಗಿದ್ದ ಇಬ್ಬರು ತಾಯಂದಿರು 6 ಮಕ್ಕಳ ಜೊತೆ ನಾಪತ್ತೆಯಾಗಿದ್ರು. ತಾಯಿಂದಿರು ಮತ್ತು ಮಕ್ಕಳು ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ರು. ಆದ್ರೆ, ನಿನ್ನೆ ಮನೆ ಯಜಮಾನನಿಗೆ ಅಪಹರಣಕಾರರಿಂದ ಕರೆ ಬಂದಿದ್ದು, 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ತಕ್ಷಣ ವಿಷಯವನ್ನ ಪೊಲೀಸರಿಗೆ ತಿಳಿಸಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು, ಅಸಲಿ ಕಹಾನಿ ಕೇಳಿ ಬೆಚ್ಚಿಬಿದ್ದಿದ್ದಾರೆ. ಮನೆಯವರು ಕೂಡ ಶಾಕ್ ಆಗಿದ್ದಾರೆ.
ತಮ್ಮದೇ ಮಕ್ಕಳಿಗೆ ಕಿಡ್ನಾಪರ್ಸ್ ಆದ ಪಾಪಿ ತಾಯಂದಿರು!
ಮಕ್ಕಳನ್ನ ಹಾಸ್ಟೆಲ್ ಸೇರಿಸೋಕಂತ ಹೋಗಿದ್ದ ತಾಯಂದಿರು ಅಸಲಿಗೆ ನಾಪತ್ತೆಯಾಗಿರಲಿಲ್ಲ. ಖುದ್ದು ಅವರಿಬ್ಬರು ತಮ್ಮ ಪ್ರಿಯಕರರ ಜೊತೆ ಸೇರಿ ತಾವೇ ಹೆತ್ತು ಹೊತ್ತಿದ್ದ ತಮ್ಮ 6 ಮಕ್ಕಳನ್ನ ಕಿಡ್ನ್ಯಾಪ್ ಮಾಡಿದ್ದರು. ಪಾಪಿ ತಾಯಂದಿರು ತಮ್ಮದೇ ಮಕ್ಕಳನ್ನ ಅಪಹರಿಸಿ ಮನೆಯವರಿಗೆ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸದ್ಯ ಹುಬ್ಬಳ್ಳಿ ಪೊಲೀಸರು ಪ್ರಕರಣವನ್ನ ಬೇಧಿಸಿದ್ದು, ಪ್ರಿಯಕರರ ಜೊತೆ ಮಹಿಳೆಯರನ್ನ ಬಂಧಿಸಿದ್ದಾರೆ. ಮಕ್ಕಳನ್ನೂ ರಕ್ಷಿಸಿದ್ದಾರೆ.
ಸೊಸೆಯರ ಪ್ರೇಮ ಪುರಾಣ
ಮಾರುತಿ ಸಾಂಬ್ರಾಣಿ ಅವರು ಧಾರವಾಡದ ಟೋಲ್ನಾಕ ನಿವಾಸಿಯಾಗಿದ್ದಾರೆ. ಇವರಿಗೆ ದೀಪಕ್ ಸಾಂಬ್ರಾಣಿ, ಸಂತೋಷ್ ಸಾಂಬ್ರಾಣಿ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ. ದೀಪಕ್ ರೇಷ್ಮಾ ದಂಪತಿಗೆ, ಇಬ್ಬರು ಗಂಡು, ಒಂದು ಹೆಣ್ಣು ಮಗಳಿದ್ದಾಳೆ. ಇನ್ನೂ, ಸಂತೋಷ್ ಪ್ರಿಯಾಂಕ ದಂಪತಿಗೂ 2 ಗಂಡು, ಒಂದು ಹೆಣ್ಣು ಮಗಳಿದ್ದಾಳೆ. ಆದ್ರೆ, ಸಂತೋಷ್ ಸಾಂಬ್ರಾಣಿ ಸಾವನ್ನಪ್ಪಿದ್ದಾರೆ. ದೀಪಕ್ ಪತ್ನಿ ರೇಷ್ಮಾ ಮದುವೆಗೂ ಮೊದಲಿನಿಂದ ಮುತ್ತರಾಜ್ ಎಂಬಾತನನ್ನ ಪ್ರೀತಿಸ್ತಿದ್ದು, ಆತ ಪೈಲ್ವಾನ್ ಆಗಿದ್ದು, ಫೈನಾನ್ಸ್ ನಡೆಸ್ತಿದ್ದಾನೆ. ಇತ್ತ ಪ್ರಿಯಾಂಕಾ ಕೂಡ ತನ್ನ ಚಪ್ಪಲಿ ಅಂಗಡಿ ಮುಂದಿದ್ದ ಗೂಡಂಗಡಿ ಸುನೀಲ್ ಮೇಲೆ ಲವ್ ಆಗಿತ್ತು. ರೇಷ್ಮಾ, ಪ್ರಿಯಾಂಕ ಇಬ್ಬರೂ ತಮ್ಮ ಪ್ರೇಮವನ್ನ ಪರಸ್ಪರ ಹೇಳಿಕೊಂಡಿದ್ರು. ಬಳಿಕ ಇಬ್ಬರೂ ಮನೆ ಬಿಟ್ಟು ಪ್ರಿಯಕರರೊಂದಿಗೆ ಎಸ್ಕೇಪ್ ಆಗಲು ಪ್ಲ್ಯಾನ್ ಮಾಡಿದ್ರು.
ಪ್ರೀಯಕರರ ಜೊತೆ ಸೇರಿ ಮಕ್ಕಳ ಕಿಡ್ನಾಪ್!
ರೇಷ್ಮಾ, ಪ್ರಿಯಾಂಕ ಇಬ್ಬರೂ ಮನೆಯಲ್ಲಿ ಮಕ್ಕಳನ್ನ ಹಾಸ್ಟೆಲ್ಗೆ ಸೇರಿಸೋದಾಗಿ ಹೇಳಿ, ಮಕ್ಕಳನ್ನ ಕರೆದುಕೊಂಡು ಹೋಗಿದ್ರು. ಆದ್ರೆ, ರೇಷ್ಮಾ, ಪ್ರಿಯಾಂಕ 6 ಮಕ್ಕಳು ವಾಪಸ್ ಬರಲಿಲ್ಲ. ಬಳಿಕ ಕುಟುಂಬಸ್ಥರು ವಿದ್ಯಾಗಿರಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ರು. 8 ಜನ ಮಿಸ್ ಆಗಿದ್ರಿಂದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಪೊಲೀಸರು ಸುತ್ತಮುತ್ತಲಿನ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದರು. ಆದ್ರೆ, ನಿನ್ನೆ ಮಾರುತಿ ಸಾಂಬ್ರಾಣಿಗೆ ರೇಷ್ಮಾ ಲವರ್ ಮುತ್ತುರಾಜ್ ಕರೆ ಮಾಡಿದ್ದ.
ಮಕ್ಕಳನ್ನ ಕಿಡ್ನಾಪ್ ಮಾಡಿದ್ದೇವೆ ಎಂದು 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ತಕ್ಷಣ ಮಾರುತಿಯವರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನ ಭೇಟಿಯಾಗಿ ವಿಷಯ ತಿಳಿಸಿದ್ರು. ತಕ್ಷಣ ಪೊಲೀಸರು ಪವರ್ ಡಂಪ್ ಜಾಲಾಡಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಬಳಿಕ ಹುಬ್ಬಳ್ಳಿ ಪೊಲೀಸರು ಬೆಂಗಳೂರಿನ ಹೆಬ್ಬಾಳಕ್ಕೆ ಬಂದು ನಾಲ್ವರನ್ನ ಅರೆಸ್ಟ್ ಮಾಡಿ, ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.ಪ್ರಿಯಕರರ ಜೊತೆ ರೇಷ್ಮಾ ಮತ್ತು ಪ್ರಿಯಾಂಕಾಳನ್ನೂ ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಒಟ್ನಲ್ಲಿ, ಪ್ರಿಯಕರರಿಗಾಗಿ ತಾವೇ ಹೆತ್ತಮಕ್ಕಳನ್ನೇ ಕಿಡ್ನಾಪ್ ಮಾಡಿದ ಈ ಪಾಪಿ ತಾಯಂದಿರಿಗೆ ಸಮಾಜ ಹಿಡಿಶಾಪ ಹಾಕ್ತಿದೆ.