ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ತಿಪ್ಪಾಪೂರ ಗ್ರಾಮದಲ್ಲಿ ದುಷ್ಕರ್ಮಿಗಳ ಕೃತ್ಯದಿಂದ ರೈತ ಧರ್ಮಪ್ಪ ಹೆಬ್ಬಾಳ್ ಅವರ ಕಠಿಣ ಪರಿಶ್ರಮಕ್ಕೆ ಬೆಂಕಿ ಹೊತ್ತಿಕೊಂಡಿರುವ ದುಃಖದ ಘಟನೆ ನಡೆದಿದೆ. ಐದು ಎಕರೆ ಹೊಲದಲ್ಲಿ ಬೆಳೆದ ಶೇಂಗಾ ಬಳ್ಳಿಯನ್ನು ಕಿತ್ತು ಬಣವಿಗೆ ಹಾಕಿದ್ದ ರೈತನ ಕನಸು ಅಪ್ರತಿಯಾಶಿತವಾಗಿ ಹೊತ್ತಿ ಉರಿದಿದೆ.
ಮೊನ್ನೆ (ಮಾ.31)ರ ಮಧ್ಯರಾತ್ರಿ ದುಷ್ಕರ್ಮಿಗಳು ಬಣವಿಗೆ ಬೆಂಕಿ ಹಚ್ಚಿದ್ದು, ಈ ಅವಘಡದಲ್ಲಿ 50 ಚೀಲಕ್ಕೂ ಹೆಚ್ಚು ಶೇಂಗಾ ಸುಟ್ಟು ಕರಕಲಾಗಿದೆ. ಬೆಂಕಿ ಹತ್ತಿಕೊಂಡ ಕ್ಷಣದಲ್ಲಿಯೇ ವ್ಯಾಪಕವಾಗಿ ಹರಡಿದ್ದು, ಈ ದುರಂತವನ್ನು ನೋಡಿದ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರ ಪರಿಶ್ರಮದಿಂದ ಬೆಂಕಿ ನಂದಿಸಲಾಯಿತು. ಆದರೆ, ಈ ನಡುವೆ ರೈತನ ಶ್ರಮ ವ್ಯರ್ಥವಾಗಿ, ಬದುಕಿಗೆ ಆಧಾರವಾಗಿದ್ದ ಬೆಳೆಯು ಬೂದಿಯಾಗಿದೆ.

“ನಮ್ಮನ್ನು ಬಾಳಬಿಡಿಸುವ ಕೃಷಿಯೇ ನಮ್ಮ ಜೀವನಾಧಾರ. ಆದರೆ ಈ ದುಷ್ಕರ್ಮಿಗಳ ಕೃತ್ಯದಿಂದ ನಾವು ಕಂಗಾಲಾಗಿದ್ದೇವೆ,” ಎಂದು ದುಃಖಗೊಂಡ ರೈತ ಧರ್ಮಪ್ಪ ಹೆಬ್ಬಾಳ್ ಹೇಳಿಕೊಂಡರು. ಈ ಘಟನೆಯ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ದುರಂತದ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈತರ ಸುರಕ್ಷತೆಗೆ ಇನ್ನಷ್ಟು ಗಮನಹರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.