ಗದಗ: ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಬಿರುಸಿನ ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಪೈಪೋಟಿ ಗರಿಗೆದರುತ್ತಿದ್ದಂತೆ, ರೋಣ–ಗಜೇಂದ್ರಗಡದಲ್ಲಿ ಕಾರ್ಯಕರ್ತರ ಆಕ್ರೋಶವೂ ಕಾವೇರಿದೆ.
ರೋಣದಲ್ಲಿ ಭುಗಿಲೆದ್ದ ಪ್ರತಿಭಟನೆ — ರಕ್ತ ಹರಿಸಿದ ಕಾರ್ಯಕರ್ತರು
🖊️ ವರದಿ: ಮಹಲಿಂಗೇಶ ಹಿರೇಮಠ. ಗದಗ
ಶುಕ್ರವಾರ ಬೆಳಗ್ಗೆ ರೋಣ ಪಟ್ಟಣದ ಸಿದ್ಧಾರೂಢ ಮಠದಿಂದ ಮೆರವಣಿಗೆ ಪ್ರಾರಂಭವಾದ ಪ್ರತಿಭಟನೆ ನಂತರ ಬೃಹತ್ ರ್ಯಾಲಿಯಾಗಿ ಮಾರ್ಪಟ್ಟಿತು. ಕಾರ್ಯಕರ್ತರು ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ, ಹೈಕಮಾಂಡ್ ವಿರುದ್ಧ ಜೋರಾಗಿ ಘೋಷಣೆ ಕೂಗಿದರು.ಈ ಪ್ರತಿಭಟನೆಯಲ್ಲಿ ಕೆಲವು ಕಾರ್ಯಕರ್ತರು ಅರೆಬೆತ್ತಲೆ ಆಗಿ ಭಾಗವಹಿಸಿದರೆ, ಕೆಲವರು ಯಜ್ಞಾಂಗಿ ಕೇಶಮುಂಡನೆ ಮಾಡಿಕೊಂಡು ತಮ್ಮ ಅಸಮಾಧಾನ ಹೊರಹಾಕಿದರು.
ಓರ್ವ ಕಾರ್ಯಕರ್ತನು ಪ್ರತಿಭಟನೆಯ ಸಮಯದಲ್ಲಿ ಬ್ಲೇಡ್‌ನಿಂದ ತಾನೇ ಕೈಗೆ ಹಾಕಿಕೊಂಡು ರಕ್ತ ಹರಿಸಿ, ಕಾಂಗ್ರೆಸ್ ಹೈಕಮಾಂಡ್ ಮೇಲೆ ತನ್ನ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು ಸ್ಥಳೀಯರಲ್ಲಿ ಕೆಲಹೊತ್ತು ಆತಂಕ ಹುಟ್ಟಿಸಿತು.
ಹೈಕಮಾಂಡ್‌ಗೆ ಸಾವಿರ ಪತ್ರ — ರೋಣ ಕಾರ್ಯಕರ್ತರ ‘ಎಚ್ಚರಿಕೆ’
ರೋಣ ಹಾಗೂ ಗಜೇಂದ್ರಗಡ, ನರೇಗಲ್ ಪ್ರದೇಶದ ನೂರಾರು ಕಾರ್ಯಕರ್ತರು ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯದೊಂದಿಗೆ “ಸಾವಿರ ಪತ್ರಗಳ ಅಭಿಯಾನ” ಹಮ್ಮಿಕೊಂಡಿದ್ದಾರೆ.
ಹೈಕಮಾಂಡ್‌ಗೆ ನೇರ ಎಚ್ಚರಿಕೆ ನೀಡುತ್ತಾ —
“ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ತಪ್ಪದು”ಎಂದು ತಿಳಿಸಿರುವುದು ಗಮನಾರ್ಹ.
50 ವರ್ಷಗಳ ಸೇವೆ ಮಾಡಿದರೂ ಒಂದೇ ಬಾರಿ ಸಚಿವ ಸ್ಥಾನವೂ ನೀಡಿಲ್ಲ ಎಂಬ ಅಸಮಾಧಾನ
78 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಜಿ.ಎಸ್. ಪಾಟೀಲ್ ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದ 8 ಬಾರಿ ಸ್ಪರ್ಧಿಸಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
‘ಸಾವಿರ ಕೆರೆಗಳ ಸರದಾರ’ ಎಂಬ ಬಿರುದನ್ನು ಪಡೆದಿರುವ ಅವರು ಜಲಸಂಪನ್ಮೂಲ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ದೊಡ್ಡದಾಗಿದೆ. ಆದರೂ ಕೂಡ ಪಕ್ಷದಿಂದ ಒಂದೇ ಬಾರಿ ಸಚಿವ ಸ್ಥಾನವೂ ಲಭಿಸದಿರುವುದು ಕಾರ್ಯಕರ್ತರ ಅಸಮಾಧಾನದ ಮೂಲ ಕಾರಣವಾಗಿದೆ.
“ಕೊಟ್ಟ ಮಾತಿನಂತೆ ಸಚಿವ ಸ್ಥಾನ ಬೇಕೇ ಬೇಕು” — ಕಾರ್ಯಕರ್ತರ ಆಗ್ರಹ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ರೋಣ ಭೇಟಿ ವೇಳೆ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರೆಂದು ಕಾರ್ಯಕರ್ತರು ಹೇಳಿದ್ದಾರೆ.ಈ ಭರವಸೆ ನಿಜವಾಗದಿದ್ದರೆ —
“ಬೆಂಗಳೂರು–ದೆಹಲಿ ಚಲೋ”,“ಸಾಮೂಹಿಕ ರಾಜೀನಾಮೆ” ಎಂಬ ಮಟ್ಟಿಗೆ ಹೋರಾಟ ನಡೆಯಲಿದೆ ಎಂದು ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಒಳಜಗಳ–ಜನರ ಅಸಮಾಧಾನ
ರಾಜಧಾನಿಯಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಗದ್ದಲ, ಇಲ್ಲಿ ರೋಣ–ಗಜೇಂದ್ರಗಡದಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಹೋರಾಟ — ಎರಡೂ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಒತ್ತಡ ತರುತ್ತಿದೆ.
ಪಕ್ಷದ ಒಳಜಗಳ ಎಷ್ಟು ದೂರ ಹೋಗಬಹುದು? ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳಲಿದೆ? ಜಿ.ಎಸ್. ಪಾಟೀಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದೇ? ಎಂಬ ಕುತೂಹಲ ಈಗ ಜಿಲ್ಲೆಯಲ್ಲಿ ತಾರಕಕ್ಕೇರುತ್ತಿದೆ.
