ಗದಗ / ಲಕ್ಷ್ಮೇಶ್ವರ:
ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಐದು ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆಗೆ ಸಂಬಂಧಿಸಿ, ಇದೊಂದು ಕಾಂಗ್ರೆಸ್ ಪಕ್ಷದ ಪೂರ್ವನಿಯೋಜಿತ ಷಡ್ಯಂತ್ರವೆಂದು ಆರೋಪಿಸಿ ಬುಧವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಾಸಕರ ಅಭಿಮಾನಿ ಬಳಗ, ಸ್ವಾಭಿಮಾನಿ ಕಾರ್ಯಕರ್ತರು ಹಾಗೂ ಬಂಜಾರ (ಲಂಬಾಣಿ) ಸಮುದಾಯದ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ದಲಿತ ನಾಯಕನಾಗಿ ಹೊರಹೊಮ್ಮುತ್ತಿರುವ ಶಾಸಕ ಡಾ. ಚಂದ್ರು ಲಮಾಣಿ ಅವರ ಜನಪರ ಕಾರ್ಯಶೈಲಿಯನ್ನು ಸಹಿಸದ ಶಕ್ತಿಗಳು ಕುತಂತ್ರದ ಮೂಲಕ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳು ಹಾಗೂ ಗದಗ ಜಿಲ್ಲೆಯ ಅನೇಕ ತಾಂಡಗಳಿಂದ ಆಗಮಿಸಿದ ಸಾವಿರಾರು ಲಂಬಾಣಿ ಸಮುದಾಯದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ, “ಶಾಸಕರೇ, ನಾವು ನಿಮ್ಮೊಂದಿಗಿದ್ದೇವೆ”, “ಯಾವುದೇ ಕಾರಣಕ್ಕೂ ಅಳುಕಬೇಡಿ” ಎಂದು ಘೋಷಣೆ ಕೂಗಿದರು.
ಪ್ರತಿಭಟನಾ ಮೆರವಣಿಗೆಯು ಸೋಮೇಶ್ವರ ತೇರಿನ ಮನೆಯಿಂದ ಆರಂಭಗೊಂಡು ಕಾಶೆಟ್ಟಿಯವರ ಓಣಿ, ಪೇಟೆ ರಸ್ತೆ, ಪುರಸಭೆ ಶಿಗ್ಲಿ ನಾಕಾ ಮಾರ್ಗವಾಗಿ ಸಾಗುತ್ತಾ ಹೊಸ ಬಸ್ ನಿಲ್ದಾಣದವರೆಗೆ ಸಂಚರಿಸಿತು. ನಂತರ ಪ್ರತಿಭಟನಾಕಾರರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಕುಳಿತು ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪರಿಣಾಮ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ನಂತರ ನಡೆದ ಸಭೆಯಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದ ಹಿರಿಯ ಮುಖಂಡರಾದ ಸುನೀಲ ಮಹಾಂತಶೆಟ್ಟರ್, ಶಂಕರ ಮರಾಠೆ, ಕರಬಸಪ್ಪ ಹಂಚಿನಾಳ, ಅಶೋಕ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಕುಮಾರಸ್ವಾಮಿ ಹಿರೇಮಠ, ನವೀನ ಹಿರೇಮಠ, ನಾಗರಾಜ ಲಕ್ಕುಂಡಿ, ಲಿಂಗರಾಜ ಪಾಟೀಲ, ಶಿವಣ್ಣ ಲಮಾಣಿ ಸೇರಿದಂತೆ ಹಲವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಸಂಬಂಧಿಸಿದ ಮುಡಾ ಹಗರಣದಲ್ಲಿ 14 ಸೈಟ್ ವಾಪಸ್ ನೀಡಿದ ಸಂದರ್ಭದಲ್ಲಿ ರಾಜೀನಾಮೆ ಕೇಳಲಿಲ್ಲವಲ್ಲ? ಅಬಕಾರಿ ಹಗರಣದಲ್ಲಿ ಆರ್.ಬಿ. ತಿಮ್ಮಾಪೂರವರು ರಾಜೀನಾಮೆ ನೀಡಿದರೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ನೈತಿಕತೆಯ ವಿರುದ್ಧವಾಗಿದ್ದು, ದಲಿತ ನಾಯಕನಾಗಿ ಹಾಗೂ ಈ ಭಾಗದಲ್ಲಿ ಉತ್ತಮ ಹೆಸರು ಮಾಡುತ್ತಿದ್ದ ಯುವ ಶಾಸಕನ ಬೆಳವಣಿಗೆಯನ್ನು ಸಹಿಸದ ಶಕ್ತಿಗಳು ಇಂತಹ ಹೇಯ ಕೃತ್ಯಕ್ಕೆ ಮುಂದಾಗಿವೆ ಎಂದು ಆರೋಪಿಸಿದರು.
ಬಂಜಾರ ಸಮಾಜವನ್ನು ತುಳಿಯುವ ಪ್ರಯತ್ನ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದ್ದು, ಷಡ್ಯಂತ್ರದ ಮೂಲಕ ದಲಿತ ಶಾಸಕರನ್ನು ಬಂಧಿಸಿ ಮಟ್ಟ ಹಾಕುವ ಹುನ್ನಾರವನ್ನು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಡಾ. ಭೀಮಸಿಂಗ ರಾಠೋಡ, ಚವ್ಹಾಣ, ಆನಂದಗೌಡ ಪಾಟೀಲ್, ಎಂ.ಎಸ್. ದೊಡ್ಡಗೌಡರ, ಡಿ.ವಾಯ್ ಹುನಗುಂದ, ಟೋಪಣ್ಣ ಲಮಾಣಿ, ಥಾವರಪ್ಪ ಲಮಾಣಿ, ಶಿವಯೋಗಿ ಅಂಕಲಕೋಟಿ, ಫಕ್ಕಿರೇಶ ರಟ್ಟಿಹಳ್ಳಿ, ಪೂರ್ಣಾಜಿ ಖರಾಟೆ, ರಮೇಶ ಧನದಮನಿ, ದೇವಪ್ಪ ಮತ್ತೂರ, ಬಸವರಾಜ ಗಾಣಗೇರ, ಈರಣ್ಣ ಪೂಜಾರ, ಜಾನು ಲಮಾಣಿ, ಸಂತೋಷ ಲಮಾಣಿ, ಗಿರೀಶ ಚೌರಡ್ಡಿ, ಮಲ್ಲೇಶಪ್ಪ ಲಮಾಣಿ, ಅಶೋಕ ಬಟಕುರ್ಕಿ, ನಿಂಗಪ್ಪ ಪ್ಯಾಟಿ, ಭೀಮಣ್ಣ ಯಂಗಾಡಿ, ಕಲ್ಲಪ್ಪ ಹಡಪದ, ನಂದಾ ಪಲ್ಲೇದ, ಜ್ಯೋತಿ ಹಾನಗಲ್, ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ್, ವಾಣಿ ಹತ್ತಿ, ಮಂಜುಳಾ ಗುಂಜಳ, ಮೋಹನ ಗುತ್ತೆಮ್ಮನವರ, ಶಿವಣಗೌಡರ ಕಂಟಿಗೌಡರ, ಶಂಕರ ಬಾವಿ, ಮಹೇಶ ಬಡ್ನಿ, ಫಕ್ಕೀರೇಶ ರಟ್ಟೆಹಳ್ಳಿ, ತಿಪ್ಪಣ್ಣ ಕೊಂಚಿಗೇರಿ, ಬಸವರಾಜ ಇಟಗಿ, ರಾಜು ಅಂದಲಗಿ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಿದರು.
ಒಟ್ಟಿನಲ್ಲಿ, ಶಾಸಕ ಡಾ. ಚಂದ್ರು ಲಮಾಣಿ ಬಂಧನ ಪ್ರಕರಣವು ಜಿಲ್ಲೆಯಲ್ಲಿ ರಾಜಕೀಯ ತಾಪಮಾನ ಹೆಚ್ಚಿಸುತ್ತಿದ್ದು, ಲಂಬಾಣಿ ಸಮುದಾಯ ಹಾಗೂ ಶಿರಹಟ್ಟಿ ಕ್ಷೇತ್ರದ ಕಾರ್ಯಕರ್ತರ ಬಲವಾದ ಬೆಂಬಲದೊಂದಿಗೆ ಈ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡುತ್ತಿದೆ.
