ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಮಹಾರಾಷ್ಟ್ರ ರಾಜ್ಯದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಿದೆ. ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ ‘ಮಹಾಯತಿ’ ಮೈತ್ರಿಕೂಟದ ನೆರವಿನಿಂದ ಹೊಸ ಸರ್ಕಾರ ರಚಿಸಲಿದೆ. ಮಹಾಯತಿ ಮೈತ್ರಿಕೂಟದ ಒಟ್ಟು ಶಾಸಕರ ಬಲ 230.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳಲ್ಲಿ ಜಯಗಳಿಸಿವೆ. ಈ ಮೂರು ಪಕ್ಷಗಳು ಸೇರಿರುವ ‘ಮಹಾಯುತಿ’ ಮೈತ್ರಿಕೂಟದ ಸರ್ಕಾರ ರಾಜ್ಯದಲ್ಲಿ ರಚನೆಯಾಗಲಿದೆ. ಆದರೆ ಮುಖ್ಯಮಂತ್ರಿ ಯಾರು? ಎಂಬುದು ಇನ್ನೂ ಕುತೂಹಲ. 2022ರಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಬಿಜೆಪಿ ಜೊತೆ ಕೈ ಜೋಡಿಸಿದರು. ಈಗ ರಾಜ್ಯದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ), ಶಿವಸೇನೆ (ಉದ್ಧವ್ ಠಾಕ್ರೆ ಬಣ) ಎಂಬ ಎರಡು ಬಣಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) 20 ಸೀಟುಗಳಲ್ಲಿ ಜಯಗಳಿಸಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಮುಂದುವರೆಯಬೇಕು ಎಂದು ಅವರ ಅಭಿಮಾನಿಗಳು, ಬೆಂಬಲಿಗರು ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಸದ್ಯ ರಾಜ್ಯಪಾಲರು ಅವರಿಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಿದ್ದಾರೆ. ಹೊಸ ಮಹಾಯತಿ ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ರಾಷ್ಟ್ರೀಯ ನಾಯಕರು ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿರುವ ಬಿಜೆಪಿಗೆ ಮಹಾಯತಿ ಮೈತ್ರಿಕೂಟದ ಇತರ ಪಕ್ಷಗಳು ಸಿಎಂ ಹುದ್ದೆ ಬಿಟ್ಟುಕೊಡುವ ನಿರೀಕ್ಷೆ ಇದೆ. ದೇವೇಂದ್ರ ಫಡ್ನವೀಸ್ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಮಹಾರಾಷ್ಟ್ರ ಬಿಜೆಪಿಯಲ್ಲಿ ಯಾರ ವಿರೋಧವೂ ಇಲ್ಲ. ಆರ್ಎಸ್ಎಸ್ ನಾಯಕರು ಸಹ ಇದಕ್ಕೆ ಒಪ್ಪಿಗೆ ನೀಡಲಿದ್ದಾರೆ.
ಆದರೆ ರಾಷ್ಟ್ರೀಯ ನಾಯಕರ ಲೆಕ್ಕಾಚಾರಗಳೇನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 2014-2019ರ ತನಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್, 2022ರಲ್ಲಿ ಮಹಾಯತಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರು.