ಗದಗ, ಏಪ್ರಿಲ್ 7: ಅವಳಿ ನಗರದ ಜನ್ರು ಬೆಚ್ಚಿಬೀಳಿಸುವಂಥ ಘಟನೆ ಮಾರ್ಚ.28 ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗರದ ವಿವಿಧ ರಸ್ತೆಗಳ ಮೇಲೆ ಬೈಕ್‌ನಲ್ಲಿ ಸದ್ದು ಮಾಡುತ್ತಾ, ಕೈಯಲ್ಲಿ ಲಾಂಗ್ ಹಿಡಿದು ಕಾರುಗಳ ಗ್ಲಾಸ್ ಪುಡಿ ಮಾಡಿದ ಪುಂಡರ ಕೃತ್ಯ ಶಹರದ ನಿವಾಸಿಗಳ ನಿದ್ರೆಗೆ ಭಂಗ ತಂದಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ರೀಲ್ಸ್ ನಲ್ಲಿ ಮಚ್ಚು ಹಿಡಿದು ಮಾಡಿದ ದೃಶ್ಯಗಳು, ಯುವ ಪುಂಡರಿಗೆ ಸ್ಪೂರ್ತಿ ನೀಡಿದಂತಾಯಿತು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಇದು ಕೇವಲ ರೀಲ್ಸ್ ಅಲ್ಲ… ರೀಯಲ್ ಅಟ್ಟಹಾಸ!

ಹೌದು, ಗದಗ ನಗರದ ವಕೀಲ ಚಾಳ, ವೀರ ಸಾವರ್ಕರ್ ರಸ್ತೆ ಹಾಗೂ ಗಣೇಶ ಗುಡಿ ರಸ್ತೆಯಲ್ಲಿ ನಡೆದ ಈ ಘಟನೆ ವೇಳೆ, ಬೈಕ್ ನಲ್ಲಿ ಅತಿ ವೇಗವಾಗಿ ಚಲಿಸುತ್ತಾ, ಕೈಯಲ್ಲಿ ಲಾಂಗ್ ಹಿಡಿದ ಮಚ್ಚೇಶ್ವರರು ಕಾರುಗಳ ಹಿಂಬದಿ ಗ್ಲಾಸ್ ಮೇಲೆ ತಮ್ಮ ಕೈಯಲ್ಲಿನ ಮಚ್ಚು ಬೀಸುತ್ತಾ, ಕ್ಷಣಮಾತ್ರದಲ್ಲೇ ಪೀಸ್ ಪೀಸ್ ಮಾಡಿದ್ದಾರೆ.
ಘಟನೆ ನಡೆದಿರುವ ಪ್ರದೇಶಗಳಲ್ಲಿ ಕನಿಷ್ಠ 7-8 ಕಾರುಗಳು ಹಾನಿಗೊಳಗಾಗಿದ್ದು, ಪುಂಡರು ನಡೆಸಿದ ಈ ಕೃತ್ಯದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಘಟನೆಯ ಶೈಲಿಯಿಂದ ಇದು ಪೂರ್ವನಿಯೋಜಿತದಂತೆ ಕಾಣಿಸುತ್ತಿದ್ದು, ಪುಂಡರು ನಿಶ್ಚಿಂತೆಗೊಳಗಾಗಿದ್ದ ಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಹಾಗಾದರೆ, ರಾತ್ರಿ ವೇಳೆಯಲ್ಲಿ ಗಸ್ತು ತಿರುಗಬೇಕಾದ ಪೊಲೀಸರು ಎಲ್ಲಿದ್ದಾರೆ?
ಅಂತ ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆ ಮಾಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಕೋಟ್
ಈಗಾಗಲೇ ಘಟನೆ ನಡೆದ ಮರುದಿನವೇ ಕೃತ್ಯ ನಡೆಸಿದ ಪುಂಡರನ್ನ ವಶಕ್ಕೆ ಪಡೆದು, ಅದರಲ್ಲಿ ಒಬ್ಬ ಮೈನರ್ ಕೂಡ ಇದ್ದು, ಎಚ್ಚರಿಕೆ ನೀಡಿ ಕಳಿಸಿದ್ದೇವೆ.ಸ್ನೇಹಿತನ ಬರ್ತಡೇ ಸಂಭ್ರಮದಲ್ಲಿ ಮದ್ಯ ಸೇವನೆ ಮಾಡಿ, ಈ ಕೃತ್ಯ ಎಸಗಿದ್ದಾರೆ.ಇವರಿಗೆ ಸರಿಯಾಗಿ ಬುದ್ಧಿ ಕಲಿಸಿ ಕಳಿಸಿದ್ದೇವೆ. ಮತ್ತೊಮ್ಮೆ ಈ ರೀತಿ ಕೃತ್ಯ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದು, ರಾತ್ರಿ ವೇಳೆಯ ಗಸ್ತು ಈಗಾಗಲೇ ಇದ್ದು, ಈ ಬಗ್ಗೆ ಮತ್ತಷ್ಟು ಕ್ರಮ ವಹಿಸುತ್ತೇವೆ.
ಧೀರಜ್ ಶಿಂಧೆ.ಸಿಪಿಐ. ಬಡವಾಣೆ ಪೊಲೀಸ್ ಠಾಣೆ.ಗದಗ