ಬೆಂಗಳೂರು, ಜೂನ್ 5:ಐಪಿಎಲ್ ಫೈನಲ್‌ನಲ್ಲಿ ಆರ್ಸಿಬಿ ಜಯ ಸಾಧಿಸಿದ ನಂತರ ನಡೆದ ವಿಜಯೋತ್ಸವವು ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಜನಸಂದಣಿಯಿಂದ ಉಂಟಾದ ಕಾಲ್ತುಳಿತದಲ್ಲಿ 11 ಜನರು ತಮ್ಮ ಪ್ರಾಣ ಕಳೆದುಕೊಂಡಿರುವ ಸುದ್ದಿ ಇಡೀ ದೇಶವನ್ನು ನೊಂದಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಉದ್ಯಮಿ ಹರ್ಷ್ ಗೋಯೆಂಕಾ ಅವರು ಭಾರತದ ವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಾಮಾನ್ಯ ಜನರ ಜೀವದ ಮೌಲ್ಯದ ಬಗ್ಗೆ ತೀವ್ರವಾಗಿ ಪ್ರಶ್ನೆ ಎತ್ತಿದ್ದಾರೆ.
ವೈಪರಿತ್ಯದಿಂದ ತುಂಬಿರುವ ಈ ಪರಿಸ್ಥಿತಿಯಲ್ಲಿ, ಹರ್ಷ್ ಗೋಯೆಂಕಾ ತಮ್ಮ ಸಾಮಾಜಿಕ ಜಾಲತಾಣ ‘X’ ನಲ್ಲಿ ಬರೆದಿದ್ದಾರೆ:
“ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, ಕುಂಭಮೇಳದಲ್ಲಿ ಕಾಲ್ತುಳಿತ, ಇದೀಗ ಬೆಂಗಳೂರಿನಲ್ಲಿ RCB ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ… ಆದರೆ ಇದಕ್ಕೆ ಹೊಣೆವಹಿಸುವವರಿಲ್ಲ. ರಾಜೀನಾಮೆ ನೀಡುವವರಿಲ್ಲ. ಯಾವುದೇ ಪಾಠವನ್ನೂ ಕಲಿಯುವ ಮನಸ್ಥಿತಿ ಇಲ್ಲ.”
ಅವರು ಮುಂದಾಗಿ ಸಿಟ್ಟಾಗಿ ಹೇಳಿರುವ ಮಾತುಗಳು ಇಡೀ ಜನಮಾನಸವನ್ನು ಎಚ್ಚರಿಸಿವೆ..!
“ಭಾರತದಲ್ಲಿ ಸಾಮಾನ್ಯ ವ್ಯಕ್ತಿಯ ಜೀವ ಅಮೂಲ್ಯವಲ್ಲ. ಅದು ಬಳಸಿ throwing ಮಾಡುವ ವಸ್ತುವಾಗಿಬಿಟ್ಟಿದೆ. ಇವತ್ತು ನಮ್ಮ ದೇಶದಲ್ಲಿ ಮಾನವನ ಪ್ರಾಣವೇ ಒಂದು ಕಪ್ ಚಹಾಕ್ಕಿಂತಲೂ ಅಗ್ಗವಾಗಿದೆ!”
RCB ತಂಡ ತನ್ನ ಐತಿಹಾಸಿಕ ಜಯವನ್ನು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ, ಲಕ್ಷಾಂತರ ಜನರು ರಸ್ತೆಗಳ ಮೇಲೆ ಸೇರಿದ್ದಾಗ ಜನಸಂದಣಿಯಿಂದ ಕಾಲ್ತುಳಿತ ಉಂಟಾಯಿತು. ಈ ವೇಳೆ ಅನೇಕರು ಗಾಯಗೊಂಡರು, ಹಲವರ ಸ್ಥಿತಿ ಗಂಭೀರವಾಗಿದೆ. ಸರ್ಕಾರದ ಯಾವುದೇ ಪೂರ್ವಸಿದ್ಧತೆ ಇಲ್ಲದಿರುವುದು, ಸಾರ್ವಜನಿಕರ ಸುರಕ್ಷತೆಯಲ್ಲಿನ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣವೆಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ.
ಹರ್ಷ್ ಗೋಯೆಂಕಾ ಅವರ ಮಾತುಗಳು ಆಡಳಿತ ವ್ಯವಸ್ಥೆ, ಸಾರ್ವಜನಿಕ ಕಾರ್ಯಕ್ರಮಗಳ ಯೋಗ್ಯ ನಿರ್ವಹಣೆ, ಮತ್ತು ನಾಗರಿಕರ ಪ್ರಾಣದ ಮೌಲ್ಯವನ್ನು ಪುನರ್ವಿಚಾರಿಸಲು ಪ್ರೇರಣೆ ನೀಡಿವೆ. ಇಂತಹ ಘಟನೆಗಳು ಪ್ರತೀ ಬಾರಿಗೆ ಮರುಕಳಿಸುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಪ್ರಜೆಯ ಪ್ರಾಣವನ್ನು ಮೌಲ್ಯಮಾಪನ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂಬ ಅಂಶ ಮತ್ತೆಂದು ಮರೆಯಲಾಗದು.