ಗದಗ:/ಎಲ್‌ಎಲ್ ಬಿ ವಿದ್ಯಾರ್ಥಿ ನೀಡಿದ ದೂರಿನ ಹಿನ್ನೆಲೆ ಬೆಟಗೇರಿ ನಾಡಕಛೇರಿಯಲ್ಲಿ ಲಂಚದ ಬೇಡಿಕೆ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಗದಗ ಘಟಕ ಯಶಸ್ವಿಯಾಗಿ ಬಯಲಿಗೆಳೆದಿದೆ.
ವರದಿ:ಮಹಲಿಂಗೇಶ ಹಿರೇಮಠ.ಗದಗ
ಅಡವಿಸೋಮಾಪುರ ಗ್ರಾಮದ ಎಲ್‌ಎಲ್‌ಬಿ ವಿದ್ಯಾರ್ಥಿ ನಾಗಾರ್ಜುನ ಕೋರಿ ದೂರು ಆಧರಿಸಿ ನಡೆದ ದಾಳಿಯ ವೇಳೆ ಕಂಪ್ಯೂಟರ್ ಆಪರೇಟರ್ ಸುರೇಶ ಹಂಚಿನಾಳ ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ದೂರುದಾರರಿಂದ ಪಡೆದ ಮಾಹಿತಿಯ ಪ್ರಕಾರ, ನಾಡಕಛೇರಿಯಲ್ಲಿ ಮೋಜಿನಿ ಅರ್ಜಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ನೆಪದಲ್ಲಿ ಆಪಾದಿತನು ರೂ. 3,000 ಲಂಚವಾಗಿ ಬೇಡಿಕೆ ಇಟ್ಟಿದ್ದ. ಇದಕ್ಕಾಗಿ ತನ್ನ ಗೆಳೆಯನ ಫೋನ್‌ಪೇ ಸಂಖ್ಯೆಗೆ ಹಣವನ್ನು ವರ್ಗಾಯಿಸಲು ಸೂಚಿಸಿದ್ದನು. ದೂರುದಾರನ ಹೇಳಿದಂತೆ ಹಣವನ್ನು ವರ್ಗಾಯಿಸಿದ ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.
ಈ ಟ್ರ್ಯಾಪ್ ಕಾರ್ಯಾಚರಣೆಗೆ ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಮತ್ತು ಪ್ರಕರಣದ ತನಿಖಾಧಿಕಾರಿ ಪೋಲೀಸ್ ಇನ್ಸ್‌ಪೆಕ್ಟರ್ ಎಸ್.ಎಸ್. ತೇಲಿ ಅವರ ಮಾರ್ಗದರ್ಶನಲ್ಲಿ, ಗದಗ ಲೋಕಾಯುಕ್ತ ಘಟಕದ ಡಿಎಸ್ಪಿ ವಿಜಯ ಬಿರಾದಾರ ಹಾಗೂ ಪಿಐ ಪರಮೇಶ್ವರ ಕವಟಗಿ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಲ್ಲಿ ಎಂ.ಎಸ್. ಗಾರ್ಗಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ, ಟಿ.ಎನ್. ಜವಳಿ, ಹೆಚ್.ಐ. ದೇಪುರವಾಲಾ, ಎಂ.ಎಸ್. ದಿಡಗೂರ, ಮುತ್ತುರಡ್ಡಿ ಬಾರಡ್ಡಿ, ಪಿ.ಎಲ್. ಪಿರಿಮಾಳ, ಎಸ್.ವಿ. ನೈನಾಪೂರ, ಎಂ.ಆರ್. ಹಿರೇಮಠ, ಐ. ಸೈಪಣ್ಣವರ ಸೇರಿದ್ದಾರೆ.
ಲಂಚ ಸ್ವೀಕರಿಸುವಾಗಲೇ ಬಲೆಗೆ ಸಿಕ್ಕಿಬಿದ್ದಿರುವ ಈ ಪ್ರಕರಣವು ನಾಡಕಛೇರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಲೋಕಾಯುಕ್ತ ಬಲೆಯ ಬಿಗಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರಕರಣ ದಾಖಲಾಗಿ ಮುಂದಿನ ತನಿಖೆ ಪ್ರಗತಿಯಲ್ಲಿದೆ.
