ಗದಗ: ಸೇವಾ ಕಾರ್ಯ ಮಾಡುವ ಧ್ಯೇಯೋದ್ದೇಶದೊಂದಿಗೆ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಸೇವೆ ಮಾಡುತ್ತಿರುವ ‘ಲಯನ್ಸ್ ಕ್ಲಬ್’ ನರಗುಂದಲ್ಲಿ ಆರಂಭವಾಗಿ 50 ವರ್ಷ ಗತಿಸಿ, ಸುವರ್ಣ ಸಂಭ್ರಮದಲ್ಲಿದ್ದು, ಮಾರ್ಚ್ 27 ರಂದು ಗುರುವಾರ ‘ಸಾರ್ಥಕ’ ಶೀರ್ಷಿಕೆಯಡಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ ಎಂದು ನರಗುಂದದ ಲಯನ್ಸ್ ಕ್ಲಬ್ ಅಧ್ಯಕ್ಷರೂ ಆಗಿರುವ ಯುವ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಸಂಜೆ 5 ಗಂಟೆಗೆ ನರಗುಂದ ಪಟ್ಟಣದ ಬವಸೇಶ್ವರ ಸಮುದಾಯ ಭವನದಲ್ಲಿ ಸಮಾರಂಭ ನಡೆಯಲಿದೆ. ನರಗುಂದದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಅವರು ಅಧ್ಯಕ್ಷತೆ ವಹಿಸುವರು. ಕಲಬುರಗಿಯ ಮಾಜಿ ಸಂಸದರೂ ಆಗಿರುವ ಭಾರತೀಯ ಸಂಸ್ಕೃತಿ ಸಂಗಮದ ಬಸವರಾಜ ಪಾಟೀಲ ಸೇಡಂ ಅವರು ದಿಕ್ಸೂಚಿ ಭಾಷಣ ಮಾಡುವರು.
ನರಗುಂದ ಕ್ಷೇತ್ರದ ಶಾಸಕರು, ಕರ್ನಾಟಕ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾದ ಸಿ.ಸಿ. ಪಾಟೀಲ, ಲಯನ್ಸ್ ಕ್ಲಬ್ ಡಿಸ್ಟಿಕ್ಟ್ 317 ಬಿ’ ದ ಗವರ್ನರ್ ಎಂಜೆಎಫ್ ಮನೋಜ ಮನೇಕ, ಹಿಂದಿನ ಗವರ್ನರ್ ಎಂಜೆಎಫ್ ಆನಂದ ಪೊತ್ನೀಸ್, ವಿಜಯಪುರದ ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ. ಬಿರಾದಾರ, ಡಾ.ಶ್ರೀಧರ ಕುರಡಗಿ, ಎನ್.ವಿ. ಮೇಟಿ, ಹುಬ್ಬಳ್ಳಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಕಾಂತ ಜೋಶಿ ಅವರು ಆಗಮಿಸುವರು.

ಸಾಮಾಜಿಕ ಕಾರ್ಯಕ್ಕೆ ಹೊಸ ವ್ಯಾಖ್ಯಾನ:
ಕ್ಲಬ್ ಎಂದಾಕ್ಷಣ ಹಲವರಿಗೆ ಬೇರೆ ರೀತಿಯದ್ದೇ ವ್ಯಾಖ್ಯಾನ ಮಾಡುತ್ತಾರೆ. ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್, ಸೇವಾ ಕಾರ್ಯಗಳ ಮೂಲಕ ಜನಮನ ಗಳಿಸಿ, ಅದಕ್ಕೊಂದು ಹೊಸ ವ್ಯಾಖ್ಯಾನವನ್ನೇ ಬರೆದಿದೆ.
1917ರಲ್ಲಿ ಅಮೆರಿಕಾದ ಚಿಕಾಗೋ ನಗರದಲ್ಲಿ ಮೆನ್ವಿನ್ ಜೋನ್ಸ್ ಸ್ಥಾಪನೆ ಮಾಡಿದ ಈ ಸಂಸ್ಥೆ ನೂರು ವರ್ಷಕ್ಕೂ ಅಧಿಕ ಕಾಲ ಜಾಗತಿಕ ಮಟ್ಟದಲ್ಲಿ ಸೇವಾ ಕಾರ್ಯ ಮಾಡುತ್ತಿದೆ. ಜಗತ್ತಿನ ಅಂದಾಜು 200 ರಾಷ್ಟ್ರ, ಪ್ರಾಂತಗಳಲ್ಲಿ ತನ್ನ ಸಂಸ್ಥೆಯನ್ನು ಹೊಂದಿದ್ದು, 49 ಸಾವಿರ ಕ್ಲಬ್‌ಗಳು, 14 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಸೇವಾ ಕಾರ್ಯಗಳನ್ನು ತನ್ನ ದ್ಯೇಯವಾಗಿ ಇರಿಸಿಕೊಂಡಿರುವ ಈ ಸಂಸ್ಥೆ ಭಾರತದಲ್ಲಿ 1956ರಲ್ಲಿ ಪ್ರಥಮ ಬಾರಿಗೆ ಮುಂಬೈನಲ್ಲಿ ಆರಂಭವಾಗಿ, 70 ವರ್ಷದಿಂದ ನಿರಂತರ ಸೇವೆ ಮಾಡುತ್ತಿದೆ. ಭಾರತ ದೇಶದಲ್ಲೇ 6,500 ಕ್ಲಬ್‌ಗಳಿದ್ದು, ಎರಡೂವರೆ ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ.
1973 ರ ಏಪ್ರಿಲ್ 9 ರಂದು 29 ಚಾರ್ಟರ್ ಸದಸ್ಯರಿಂದ ನರಗುಂದ ಲಯನ್ಸ್ ಕ್ಲಬ್ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಸುವರ್ಣ ಸಂಭ್ರಮದಲ್ಲಿದೆ. ಆ ದಿನ ಹಿರಿಯರ ಸ್ಮರಣೆ ಇರಲಿದ್ದು, ನರಗುಂದದ ಲಯನ್ಸ್ ಕ್ಲಬ್‌ನ ಹಿಂದಿನ ಅಧ್ಯಕ್ಷರೂ ಆಗಿರುವ ನರಗುಂದ ಶಾಸಕರಾದ ಸಿ.ಸಿ. ಪಾಟೀಲರು, ಹಿರಿಯರಾದ ಜಿ.ಟಿ. ಗುಡಿಸಾಗರ, ಜಾಬಣ್ಣವರ ಸೇರಿ ಹಲವರ ಮಾರ್ಗದರ್ಶನದಲ್ಲಿ ಮತ್ತಷ್ಟು ಸಾಮಾಜಿಕ ಸೇವೆ ಮಾಡುವ ಸಂಕಲ್ಪ ಮಾಡುತ್ತೇವೆ ಎಂದು ಉಮೇಶಗೌಡ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನರಗುಂದ ಲಯನ್ಸ್ ಕ್ಲಬ್‌ನ ಎನ್.ವಿ. ಮೇಟಿ, ಕೆ.ಎಸ್. ಹೂಲಿ, ಅಜ್ಜನಗೌಡ ಪಾಟೀಲ, ಸುನೀಲ ಶೆಲ್ಲಿಕೇರಿ, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ಗದಗ-ಬೆಟಗೇರಿ ನಗರಸಭೆ ಸದಸ್ಯ ಪ್ರಕಾಶ ಅಂಗಡಿ ಸೇರಿ ಹಲವರಿದ್ದರು.