ಗದಗ : ಸಂವಿಧಾನದ ಮೌಲ್ಯಗಳು ನಾಗರಿಕ ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ ಮಾತ್ರ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನೆಡಸಲು ಸಾಧ್ಯ ಎಂದು ಲೋಕಾಯುಕ್ತ ಪೋಲಿಸ್ ಅಧಿಕಾರಿ ಶ್ರೀ ಪರಮೇಶ್ವರ ಕವಟಗಿ ತಿಳಿಸಿದರು.
ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ‘ಸಂವಿಧಾನದ ಮೌಲ್ಯಗಳು ಮತ್ತು ನೈತಿಕತೆ‘ ಎಂಬ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಮುಂದುವರೆದು ಮಾತನಾಡಿದ ಅವರು ಸಂವಿಧಾನಿಕ ತತ್ವಗಳನ್ನು ಜೀವನದಲ್ಲಿ ಮೌಲ್ಯಗಳಾಗಿ ರೂಢಿಸಿಕೊಂಡಲ್ಲಿ ಬಲಿಷ್ಠ ಪ್ರಜಾಪ್ರಭುತ್ವದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ರಚನಾಕಾರರು ಸಂವಿಧಾನದ ನಾಲ್ಕನೆ ಭಾಗದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಅಳವಡಿಸಿ, ಕಲ್ಯಾಣ ರಾಷ್ಟ್ರದ ನಿರ್ಮಾಣವಾಗುವ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಶ್ರೀ ಬಸವರಾಜ ಹೊಳಿ ಮಾತನಾಡಿ ಸಂವಿಧಾನದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಹೀಗಾಗಿ ಅವುಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯ. ಸಂವಿಧಾನವು ಪ್ರತಿಯೊಬ್ಬ ನಾಗರಿಕರ ಮೌಲ್ಯಗಳು, ಸಾಮಾಜಿಕ, ಆರ್ಥಿಕ, ನಂಬಿಕೆ ಮತ್ತು ಶ್ರದ್ಧೆ ಪೂಜಿಸುವ ಹಕ್ಕು ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಮೌಲ್ಯಗಳು ಮರೆತು ದೇಶದಲ್ಲಿ ಜಾತೀಯತೆ, ಭ್ರಷ್ಟಾಚಾರ ಹಾಗೂ ಪರಂಪರೆಯ ರಾಜಕೀಯ ದತ್ತ ಹೊಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎ. ಕೆ. ಮಠರವರು ದೇಶದಲ್ಲಿ ಬಹಳಷ್ಟು ಜನ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಕರ್ತವ್ಯಗಳು ಮರೆತು ಬಿಡುತ್ತಿದ್ದಾರೆ. ಹೀಗಾಗಿ ನಾವು ಹಕ್ಕುಗಳನ್ನು ಪಾಲಿಸುತ್ತಿಲ್ಲ ಎಂದ ಅವರು, ವಿದ್ಯಾರ್ಥಿಗಳು ಮೂಲಭೂತ ಕರ್ತವ್ಯಗಳು ಜೀವನದ ಮೌಲ್ಯಗಳನ್ನು ಮಾಡಿಕೊಳ್ಳಬೇಕು ಎಂದರು.
ನೆಹರು ಯುವ ಕೇಂದ್ರದ ರಜನಿ ಎನ್ ರವರು ಮಾತನಾಡಿದರು.
ಉಪಪ್ರಾಂಶುಪಾಲರಾದ ಡಾ. ವೀಣಾ ಈ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಸೋನಿಯಾ ಘೋಡ್ಕೆ ಪ್ರಾರ್ಥಿಸಿದರು. ಪ್ರೊ. ವಿಶಾಲ ತೆಳಗಡೆ ನಿರೂಪಿಸಿದರು. ಪ್ರೊ. ಚಂದಾಲಿಂಗಪ್ಪ ಹಳ್ಳಿಕೇರಿ ವಂದನೆಗೈದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ, ವಿದ್ಯಾರ್ಥಿ ವೃಂಧ ಹಾಜರಿದ್ದು ಯಶಶ್ವಿಗೊಳಿಸಿದರು.