ಗದಗ:ಮುಂಬರುವ ಜನವರಿ 26 ಒಳಗಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ ಮೊರೆ ಹೋಗಿರುವ ಕಾಂಗ್ರೆಸ್ ಸದಸ್ಯರಿಂದ ಅರ್ಜಿ ಹಿಂಪಡೆಯಬೇಕು. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಗೆ ಅಗಬೇಕು. ಇಲ್ಲದಿದ್ರೆ ಗಣರಾಜ್ಯೋತ್ಸವ ದಿನ ಸಚಿವ ಎಚ್ .ಕೆ. ಪಾಟೀಲರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡುವ ಮೂಲಕ ಪ್ರತಿಭಟಿಸಲಾಗುವದು ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿಯನ್ನು ಸರಕಾರವೇ ನಿರ್ಧರಿಸಿದೆ. ಆದರೆ ಅದೇ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಸದಸ್ಯರು ಹೈಕೋರ್ಟ ಮೊರೆ ಹೋಗಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಸಂವಿಧಾನದ ರಕ್ಷಕರು ಎನ್ನುವಂತೆ ವರ್ತಿಸುವ ಕಾಂಗ್ರೆಸ್ ನಾಯಕರು, ನಗರಸಭೆಯಲ್ಲಿ ಚುನಾಯಿತ ಆಡಳಿತವನ್ನು ಅಧಿಕಾರಿಗಳಿಗೆ ಅಡ ಇಟ್ಟಿದ್ದಾರೆ.ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸದಂತೆ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರ ನೆಪದಲ್ಲಿ ಮತ್ತೊಮ್ಮೆ ಹಾಲಿನ ದರ ಏರಿಕೆಗೆ ಸರಕಾರ ಸಿದ್ಧವಾಗುತ್ತಿದೆ. ಈಚೆಗಷ್ಟೆ 10 ಎಂಎಲ್ ಹೆಚ್ಚು ಹಾಲು ಕೊಡುವ ನೆಪದಲ್ಲಿ ಹಾಲಿನ ದರ ಏರಿಕೆ ಮಾಡಲಾಗಿದೆ. ಆದರೆ 10 ಎಂಎಲ್ ಹಾಲು ಮಾತ್ರ ಏರಿಕೆಯಾಗಿಲ್ಲ. ಈಗ ಮತ್ತೊಮ್ಮೆ ಹಾಲು, ವಿದ್ಯುತ್ ದರ ಏರಿಕೆ ಮಾಡಿದಲ್ಲಿ ಜನ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು
ಲಕ್ಕುಂಡಿ, ವೀರನಾರಾಯಣ ದೇವಸ್ಥಾನಗಳ ಅಭಿವೃದ್ಧಿಗೂ ಮುನ್ನವೇ ಜವಳಿ ಬಜಾರ್ ನಲ್ಲಿರುವ ರಾಮೇಶ್ವರ ದೇವಸ್ಥಾನ ಅಭಿವೃದ್ಧಿಗೆ ಒತ್ತು ಕೊಡುವಂತೆ ಮನವಿ ಸಲ್ಲಿಸಿದ್ದೆವೆ. ಆದರೂ ರಾಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಆರಂಭವಾಗಿಲ್ಲ.ಇನ್ನು ಅವಳಿ ನಗರದ ಬೀದಿ ದೀಪ ನಿರ್ವಹಣೆ ಆರಂಭವಾಗಿಲ್ಲ. ಈ ಕೂಡಲೇ ಸಚಿವರು ಎಚ್ಚೆತ್ತು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಐತಿಹಾಸಿಕ ವೀರನಾರಾಯಣ ದೇವಸ್ಥಾನದ ಪುನರುತ್ಥಾನಕ್ಕಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಆರಂಭಿಸಲಾಗಿದೆ. ಆದರೆ ಏನು ಕೆಲಸ ಮಾಡುತ್ತಿದ್ದೆವೆ ಎನ್ನುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಬಳಿ ಮಾಹಿತಿಯೇ ಇಲ್ಲ. ಕಾಮಗಾರಿಯ ಮಾಹಿತಿ ಇರದಿದ್ದರೆ, ತರಾತುರಿಯಲ್ಲಿ ದೇವಸ್ಥಾನದ ಗೋಡೆ ಒಡೆದಿರುವುದರ ಹಿಂದೆ ವೈಯಕ್ತಿಕ ಹಿತಾಸಕ್ತಿ ಅಡಗಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವೀರಪ್ಪ ಜಿರಲಿ,ದೇವಪ್ಪ ಮಲ್ಲಸಮುದ್ರ, ಪ್ರಫುಲ್ ಪುಣೇಕರ, ಸಂತೋಷ ಪಾಟೀಲ, ಶರಣಪ್ಪ ಹೂಗಾರ, ಜಿ.ಕೆ. ಕೊಳ್ಳಿಮಠ, ಎಂ.ಎಸ್. ಪರ್ತಗೌಡ್ರ ಉಪಸ್ಥಿತರಿದ್ದರು