ಗದಗ : “ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ಅವರ ದೃಢ ಇಚ್ಛಾಶಕ್ತಿಯಿಂದಲೇ ಗದಗ ಜಿಲ್ಲೆ ರೂಪುಗೊಂಡಿತು. ಅದರಿಂದಾಗಿ ತಾಲೂಕು ವಾಣಿಜ್ಯೋದ್ಯಮ ಸಂಸ್ಥೆಯು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಾಗಿ ಬೆಳೆದು ಇಂದು ಸುವರ್ಣ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕೆ.ಎಚ್.ಪಾಟೀಲ್ ಸಭಾಭವನದಲ್ಲಿ ಶನಿವಾರ ಸಂಜೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪಾರಿತೋಷಕ ವಿತರಣಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸಿದ ದಿ.ಜೆ.ಎಚ್.ಪಟೇಲ್ ಅವರನ್ನು ನಾವು ಎಲ್ಲರೂ ನೆನಪಿಸಿಕೊಳ್ಳಲೇಬೇಕು. ಅವರ ಕಾಲಘಟ್ಟದಲ್ಲಿಯೇ ಗದಗ ಜಿಲ್ಲೆ ಪ್ರತ್ಯೇಕವಾಗಿ ಹೊರಹೊಮ್ಮಿತು. ಈ ಮೊದಲು ಗದಗ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ಆಗ ಗದಗ ತಾಲೂಕು ವಾಣಿಜ್ಯೋದ್ಯಮ ಸಂಸ್ಥೆಯಾಗಿತ್ತು. ಜಿಲ್ಲೆಯಾಗಿ ರೂಪುಗೊಂಡ ಬಳಿಕ ತಾಲೂಕು ಸಂಸ್ಥೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಾಗಿ ಪ್ರಗತಿ ಕಂಡಿತು. ಇಂದು ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವುದು ಜಿಲ್ಲೆಗೆ ಸಂತಸದ ಸಂಗತಿ” ಎಂದರು.

“ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡುವುದರ ಜೊತೆಗೆ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು. ದಲಾಲಿ ಅಂಗಡಿಗಳ ಜೊತೆಗೆ ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಿದರೆ ಜಿಲ್ಲೆಯ ಯುವಪೀಳಿಗೆಯವರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ. ಕೈಗೆಟುಕುವ ಉದ್ಯೋಗಗಳನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಬಹುದು. ಗದಗ ಜಿಲ್ಲೆಯು ಸಂಗೀತ, ಕಲೆ, ಸಹಕಾರಿ, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿರುವಂತೆ, ಮುಂದಿನ 60 ನೇ ವರ್ಷದ ಸಂಭ್ರಮದ ವೇಳೆಗೆ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿಯೂ ಹೆಸರುವಾಸಿಯಾಗಬೇಕೆಂದು ಆಶಯ ವ್ಯಕ್ತಪಡಿಸುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಿ.ವಿ.ಕುಷ್ಟಗಿ, ಎಚ್.ವಿ.ಶಾನಭೋಗರ, ಅಶೋಕ ನಿಲೂಗಲ್, ಚಂದ್ರು ಬಾಳಿಹಳ್ಳಿಮಠ, ತೋಂಟೇಶ ಕುರಡಗಿ, ದೇವದಾಸ ಕಾಮತ, ಸಿದ್ದರಾಮಯ್ಯ ಸಂಶಿಮಠ, ಮಲ್ಲಿಕಾರ್ಜುನ ಸುರಕೋಡ, ಶೇಖಣ್ಣ ಗದ್ದಿಕೇರಿ, ಶರಣಬಸಪ್ಪ ಕುರಡಗಿ, ಬಾಲಚಂದ್ರ ಭರಮಗೌಡ್ರ, ಮೋಹನ ಕೋಟಿ, ಸಂಗಮೇಶ ದುಂದೂರ, ದತ್ತುದಾಸ ಪುಣೇಕರ, ಆನಂದ ಪೋತ್ನಿಸ್, ರಾಮನಗೌಡ ದಾನಪ್ಪಗೌಡ್ರ, ಮದುಸೂಧನ ಪುಣೇಕರ, ಈಶ್ವರಪ್ಪ ಮುನವಳ್ಳಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಉಮೇಶ ಹುಬ್ಬಳ್ಳಿ, ಶ್ರೀಮತಿ ಜಯಶ್ರೀ ತಾತನಗೌಡ ಪಾಟೀಲ್, ಶ್ರೀಮತಿ ಸುವರ್ಣ ಸದಾಶಿವಯ್ಯ ಮದರಿಮಠ ಇವರನ್ನು ಸನ್ಮಾನಿಸಲಾಯಿತು.

ಅದೇ ರೀತಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ೨೦೨೫ ನೇ ಸಾಲಿನ “ವಾಣಿಜ್ಯರತ್ನ” ಪುರಸ್ಕಾರಕ್ಕೆ ಭಾಜನರಾದ ವಿಜಯನಿಧಿ ಆಗೋ ಇಂಡಸ್ಟ್ರೀಜ್ ಮಾಲೀಕರಾದ ಶರಣಬಸಪ್ಪ ಗುಡಿಮನಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಗಣ್ಯರು ಹಾಗೂ ವಿಜೇತ ಕ್ರೀಡಾಪಟುಗಳನ್ನು ಗೌರವಿಸಲಾಯಿತು.
ಈ ವೇಳೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ್,ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿಯ ಅಧ್ಯಕ್ಷ ಎಸ್.ಪಿ.ಸಂಶಿಮಠ, ಚೇರ್ಮನ್ ಆನಂದ ಪೋತ್ನಿಸ್, ಕೋ-ಚೇರ್ಮನ್ ಸದಾಶಿವಯ್ಯ ಮದರಿಮಠ, ಶರಣಬಸಪ್ಪ ಗುಡಿಮನಿ, ದಾನಯ್ಯ ಗಣಾಚಾರಿ, ಚಂದ್ರು ಬಾಳಿಹಳ್ಳಿಮಠ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
