ಬೆಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ಕಮಲ ಮನೆ ಕೊತ ಕೊತನೆ ಕುದಿಯುತ್ತಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಪಕ್ಷದೊಳಗೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಅಧ್ಯಕ್ಷ ಕುರ್ಚಿಗೆ ಚುನಾವಣೆ ಬೆನ್ನಲ್ಲೇ ರಾಜ್ಯಕ್ಕೆ ರಾಧಾ ಮೋಹನ್ ದಾಸ್ ಎಂಟ್ರಿ ಕೊಟ್ಟಿದ್ದು, ಸರಣಿ ಸಭೆ ಶುರುವಾಗಿವೆ.ಇನ್ನು ನಿನ್ನೆ ನಡೆದ ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಉಸ್ತುವಾರಿ ರಾಧಾ ಮೋಹನ್ ದಾಸ್ ವಿರುದ್ಧ ಕೆಂಡಾಮಂಡಲರಾಗಿದ್ದು, ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ. ಅಲ್ಲದೇ ದೂರವಾಣಿ ಮೂಲಕ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ.
ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು ಈ ವೇಳೆ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಬಿ.ಶ್ರೀರಾಮುಲು ಮೇಲೆಯೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಗಂಭೀರ ಆರೋಪ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಸದಾನಂದ ಗೌಡ ಸಮಿತಿ ಉಪ ಚುನಾವಣೆ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಸಭೆಯಲ್ಲೇ ಪ್ರಶ್ನಿಸಿದ್ದಾರೆ.

ರಾಧಾಮೋಹನ್ ದಾಸ್ ಅಗರ್ವಾಲ್ ಏನೋ ಉತ್ತರ ಪ್ರದೇಶದವರು. ರಾಜ್ಯಾಧ್ಯಕ್ಷರಾಗಿ ನೀವಾದರೂ ಹೇಳಿ ನಮ್ಮ ರಕ್ಷಣೆಗೆ ಬರಬೇಕಲ್ಲವೇ? ಎಂದು ವಿಜಯೇಂದ್ರ ಅವರಿಗೆ ಹೇಳಿದ್ದಾರೆ. ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿ, ಇಲ್ಲ, ನನ್ನ ಬಗ್ಗೆಯೂ ಹೀಗೆ ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಮುಲು, ನಿಮಗೆ ಇಷ್ಟ ಇಲ್ಲ ಅಂತಾದರೆ ಬೇಕಾದರೆ ನಾನು ಪಕ್ಷ ಬಿಡುತ್ತೇನೆ. ಆದರೆ ಪಕ್ಷ ಬಿಡುವ ಮುನ್ನ ಏನು ಆಗಿದೆ ಎಂದು ಹೇಳಿ ಬಿಡುತ್ತೇನೆ. ಮೋದಿ, ಶಾ, ಹೈಕಮಾಂಡ್ ಎಲ್ಲರಿಗೂ ಏನು ಆಗಿದೆ ಎಂದು ಹೇಳಿ ನಾನು ಪಕ್ಷ ಬಿಡುತ್ತೇನೆ. ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಇಲ್ಲಿ ಸುಮ್ಮನಿದ್ದರೆ ಬೆಲೆಯೇ ಇಲ್ಲ . ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ರಾಧಾ ಮೋಹನ್ ದಾಸ್ ಆರೋಪದ ಬಗ್ಗೆ ಶ್ರೀರಾಮುಲು, ವಿಜಯೇಂದ್ರ ವಿರುದ್ಧವೂ ಸಹ ಮುಗಿಬಿದ್ದಿದ್ದಾರೆ. ನೀವು ರಾಜ್ಯಾಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿ ಇದ್ದೀರಿ. ನಾನು ನಿಮ್ಮ ತಂದೆ ಯಡಿಯೂರಪ್ಪನವರ ಜೊತೆ ಕೆಲಸ ಮಾಡಿದ್ದೇನೆ. ನಿಮಗೆ ನಾವು ಬೇಡವಾದ್ರೆ ಹೇಳಿ ಪಕ್ಷವನ್ನು ಬಿಡಲು ನಾವು ಸಿದ್ಧರಿದ್ದೇವೆ. ಸ್ವಾಭಿಮಾನಕ್ಕೆ ಧಕ್ಕೆ ತಂದರೇ ಸಮಾಜವನ್ನು ಅವಮಾನಿಸಿದ್ರೆ ನಾವು ಪಕ್ಷ ಬಿಡಲು ಸಿದ್ಧ ಎಂದು ವಿಜಯೇಂದ್ರಗೆ ಖಡಕ್ ಆಗಿ ಹೇಳಿದ್ದಾರೆ.
ಇನ್ನು ಕೋರ್ ಕಮಿಟಿಯಲ್ಲಿನ ಬೆಳವಣಿಗೆ ಬಗ್ಗೆ ಶ್ರೀರಾಮುಲು ಹೈಕಮಾಂಡ್ ನಾಯಕರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಸಂಘ ಪರಿವಾರದ ಇಬ್ಬರು ಮುಖಂಡರಿಗೆ ಕರೆ ಮಾಡಿ ಕೋರ್ ಕಮಿಟಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಶಾಸಕ ಜನಾರ್ದನರೆಡ್ಡಿ ಮಾತು ಕೇಳಿ ನನ್ನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಸಭೆಯಲ್ಲಿ ನನ್ನನ್ನು ಅವಮಾನ ಮಾಡಲಾಗಿದೆ. ಎಸ್ಟಿ ನಾಯಕತ್ವದ ಬಗ್ಗೆ ಸಭೆಯಲ್ಲಿ ಅವಮಾನ ಮಾಡಲಾಗಿದೆ. ಈ ರೀತಿಯ ಘಟನೆಗಳು ನಡೆದರೆ ಪಕ್ಷದಲ್ಲಿ ದುಡಿಯುವುದ ಕಷ್ಟ ಎಂದಿದ್ದಾರೆ. ಪಕ್ಷ ಕಷ್ಟದಲ್ಲಿದ್ದ ಸಂದರ್ಭದಲ್ಲಿ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಎಲ್ಲರ ವಿರುದ್ಧ ಆಧಾರರಹಿತ ಮಾತನಾಡುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂತೋಷ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.