ಗದಗ:
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮದ ಹೊರವಲಯದಲ್ಲಿ ಖಾಸಗಿ ಶಾಲಾ ಬಸ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎಲ್‌ಕೆಜಿ ವಿದ್ಯಾರ್ಥಿ ಪ್ರಥಮ ಅರುಣ ಲಮಾಣಿ ಖಾಸಗಿ ಶಾಲಾ ವಾಹನದಡಿ ಸಿಲುಕಿ ಡಿಸೆಂಬರ್ 17 ರಂದು ಮೃತಪಟ್ಟ ಘಟನೆಗೆ ಸಂಬಂಧಿಸಿ, ಪತ್ರಿಕೆಗಳಲ್ಲಿ (ಸಿಟಿ ಎಕ್ಸಪ್ರೆಸ್) ಪ್ರಕಟವಾದ ವರದಿಯನ್ನು ಆಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದೆ.
ಈ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶೀಧರ ಕೋಸಂಬೆ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು, ಮೋಟಾರು ವಾಹನ ಕಾಯ್ದೆ–1988ರ ಅನ್ವಯ ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸಲಾಗದ ಕಾರಣ ರಾಜ್ಯದಲ್ಲಿ ಖಾಸಗಿ ಶಾಲಾ ವಾಹನಗಳಿಂದ ಮಕ್ಕಳ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲಾ ವಾಹನಗಳಲ್ಲಿ ಜಿಪಿಎಸ್ ಹಾಗೂ ಸಿಸಿ ಟಿವಿ ಕ್ಯಾಮರಾಗಳ ಅಳವಡಿಕೆ, ಮಕ್ಕಳ ಸುರಕ್ಷತೆಗೆ ಆಯಾಗಳ ನೇಮಕ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಆದರೆ ಸಾರಿಗೆ ಇಲಾಖೆಯಿಂದ ಈ ಮಾರ್ಗಸೂಚಿಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲವೆಂದು ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಶಾಲಾ ವಾಹನಗಳ ಸುರಕ್ಷತೆ ಪರಿಶೀಲನೆ ಹಾಗೂ ಮಕ್ಕಳ ಸಂರಕ್ಷಣೆಯ ಖಾತರಿಪಡಿಸುವ ಜವಾಬ್ದಾರಿ ಸಾರಿಗೆ ಇಲಾಖೆಯ ಮೇಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವ ಆಯೋಗ, ಕಾಲಕಾಲಕ್ಕೆ ಶಾಲಾ ವಾಹನಗಳ ತಪಾಸಣೆ ನಡೆಸಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸೂಚಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನೇಕ ಶಾಲಾ ವಾಹನಗಳು ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಪಾಲಿಸದೆ ಇರುವುದರಿಂದ ಇಂತಹ ದುರ್ಘಟನೆಗಳು ಮರುಕಳಿಸುತ್ತಿರುವುದಕ್ಕೆ ಆಯೋಗ ತೀವ್ರ ಬೇಸರ ವ್ಯಕ್ತಪಡಿಸಿದೆ.
ಇದೇ ವೇಳೆ, ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಗಳು ಹಾಗೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಮತ್ತು ಕಡ್ಡಾಯವಾಗಿ ಜಾರಿಗೆ ತರುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶೀಧರ ಕೋಸಂಬೆ ಅವರು ಪತ್ರ ಬರೆದಿದ್ದಾರೆ.
