Sunday, April 20, 2025
Homeರಾಜ್ಯತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್

ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್

ಲಕ್ಷ್ಮೇಶ್ವರ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ತೀರದ ತಲೆ ನೋವಾಗಿದ್ದ ಗ್ರಾಪಂ ತೆರಿಗೆ ಬಾಕಿ ವಸೂಲಾತಿ ಪ್ರಮಾಣವು ದಿನೇ ದಿನೆ ಹೆಚ್ಚಾಗುತ್ತಿದ್ದು, ಜಿಲ್ಲೆಯ 7 ತಾಲೂಕುಗಳಲ್ಲಿ ಗ್ರಾಮ ಪಂಚಾಯತಿ ತೆರಿಗೆ ವಸೂಲಿಯಲ್ಲಿ ಲಕ್ಷ್ಮೇಶ್ವರ ತಾಲೂಕು ಶೇ.102.01ರಷ್ಟು ವಸೂಲಿ ಮಾಡಿ ಮೊದಲ ಸ್ಥಾನದಲ್ಲಿದೆ.

ಪ್ರಸಕ್ತ ಸಾಲಿನ ಬೇಡಿಕೆಯಂತೆ 149.25 ಕೋಟಿ ಸೇರಿ 152.25 ಕೋಟಿ ರೂ. ಸಂಗ್ರಹವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.102.01 ಸಾಧನೆಯಾಗಿದ್ದು. ಒಟ್ಟು ಲಕ್ಷ್ಮೇಶ್ವರ ತಾಲೂಕಿನ 14 ಗ್ರಾಪಂಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ.102.01 ರಷ್ಟು ಸಾಧನೆ ಮಾಡುವುದರ ಮುಖಾಂತರ ಗ್ರಾಪಂ ತೆರಿಗೆ ವಸೂಲಿನಲ್ಲಿ ಇಡೀ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ವಿಶೇಷ ಅಭಿಯಾನದ ಫಲ:

ಹಲವಾರು ವರ್ಷಗಳಿಂದ ಗ್ರಾಪಂ ತೆರಿಗೆ ವಸೂಲಾತಿ ತೀವ್ರ ಮಂದಗತಿಯಲ್ಲಿ ಸಾಗಿದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಸಿದ ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಮೂರು ಹಂತಗಳಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಗ್ರಾಪಂ ಅಧಿಕಾರಿ, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಜನರ ಮನವೊಲಿಸಿ ತೆರಿಗೆ ವಸೂಲಿಯನ್ನು ಮಾಡುತ್ತಿದ್ದು, ಇದರಿಂದಾಗಿ ಗ್ರಾಪಂಗಳ ಆರ್ಥಿಕ ಬಲವು ಹೆಚ್ಚಾಗತೊಡಗಿದೆ.

ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಕರವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರವಸೂಲಿಗಾರರು ಗ್ರಾಪಂಗಳಲ್ಲಿ ಸಭೆ ನಡೆಸಿ, ಶೇ.100ರಷ್ಟು ಕಡ್ಡಾಯವಾಗಿ ಕರವಸೂಲಿ ಪ್ರಗತಿ ಸಾಧಿಸಲು ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮನೆ- ಮನೆ ಭೇಟಿ ಮತ್ತು ಜಾಥಾ ಕಾರ್ಯಕ್ರಮ ಮೂಲಕ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು. ಅದರಂತೆ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಕರವಸೂಲಿಗಾರರು ಪ್ರಗತಿ ಸಾಧಿಸಲು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಹಂತಗಳಲ್ಲಿ ಮನೆ ಮನೆಗೆ ತೆರಳಿ ಕರವಸೂಲಿ ಮಾಡುತ್ತ ಬಂದಿದ್ದರು.

ಇದರ ಬಗ್ಗೆ ಸಾರ್ವಜನಿಕರು ಸಹ ಸ್ಪಂದಿಸುತ್ತಿದ್ದರು. ಇದರಿಂದ ಗ್ರಾಪಂ ಕರವಸೂಲಿ ಗುರಿ ಸಾಧನೆಯಾಗಲಿದೆ ಎಂಬ ಆಶಭಾವನೆಯಿತ್ತು. ಅದು ಈ ಸಾಕಾರವಾದಂತಾಗಿದೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ.

ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿಯ ಕರಪರಿಷ್ಕರಣೆ ಬಗ್ಗೆ ಮತ್ತು ಕರವಸೂಲಾತಿ ಬಗ್ಗೆ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ತೆರಿಗೆ ವಿಧಿಸುವುದು, ತೆರಿಗೆ ಪರಿಷ್ಕರಿಸುವುದು ಮತ್ತು ತೆರಿಗೆ ವಸೂಲಿ ಮಾಡುವ ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಎಲ್ಲ ಗ್ರಾಮ ಪಂಚಾಯತಿಗಳು ಅಭಿವೃದ್ಧಿ ಹೊಂದಬೇಕಾದರೆ ಪಂಚಾಯಿತಿ ಹಣಕಾಸಿನಲ್ಲಿ ಸಧೃಡವಾಗಿರುವುದು ಬಹಳ ಮುಖ್ಯವಾಗಿದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಯಳವತ್ತಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ನಿರ್ದೇಶಕಿ (ಪಂ.ರಾ) ಸವಿತಾ ಹುನಗುಂದ.

ತೆರಿಗೆ ವಸೂಲಿಯಲ್ಲಿ ಶೇ.100ರಷ್ಟು ಸಾಧನೆ ಮಾಡಿದ ಗ್ರಾಪಂಗಳು..

ಪ್ರಸಕ್ತ ಸಾಲಿನ ಗ್ರಾಪಂ ತೆರಿಗೆ ವಸೂಲಿಯಲ್ಲಿ ಲಕ್ಷ್ಮೇಶ್ವರ ತಾಲೂಕು  ಶೇ.102.01 ರಷ್ಟು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದರೆ. ತಾಲೂಕಿನ 14 ಗ್ರಾಪಂಗಳ ಪೈಕಿ ರಾಮಗಿರಿ ಶೇ.144.21,  ಅಡರಕಟ್ಟಿ ಶೇ.138.92, ಬಟ್ಟೂರ ಶೇ.123.89, ಪು.ಬಡ್ನಿ ಶೇ.114.55, ಸೂರಣಗಿ ಶೇ. 112.12, ಯಳವತ್ತಿ ಶೇ. 107.25, ಶಿಗ್ಲಿ ಶೇ. 103.10, ಹುಲ್ಲೂರ ಶೇ. 102.95, ದೊಡ್ಡೂರು ಶೇ. 101.69, ಮಾಡಳ್ಳಿ ಶೇ. 100.94 ಈ 10 ಗ್ರಾಮ ಪಂಚಾಯತಿಗಳು ಪ್ರಸ್ತುತ ವರ್ಷದ ಬೇಡಿಕೆಗೂ ಮೀರಿ ಸಾಧನೆ ಮಾಡಿವೆ. ಉಳಿದ ಸದ್ಯದಲ್ಲೇ ತಮ್ಮ ಬೇಡಿಕೆಯ ಅನುಸಾರ ಪ್ರತಿಶತಃ ನೂರರಷ್ಟು ತೆರಿಗೆ ವಸೂಲಾತಿ ಮಾಡಲಿವೆ.

ಗ್ರಾಪಂಗಳು ಆರ್ಥಿಕವಾಗಿ ಸದೃಢವಾಗಲು ಕರ ವಸೂಲಾತಿ ಅತ್ಯವಶ್ಯ. ಈ ನಿಟ್ಟಿನಲ್ಲಿ ತಾಲೂಕಿನ ಗ್ರಾಮ ಪಂಚಾಯತಿಯ ಎಲ್ಲ ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಕರ ವಸೂಲಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಇದರಿಂದ ಪ್ರಸಕ್ತ ಸಾಲಿನ ಕರ ವಸೂಲಾತಿಯಲ್ಲಿ ಲಕ್ಷ್ಮೇಶ್ವರ ತಾಪಂ ಶೇ.102.01 ಪ್ರಗತಿ ಸಾಧ್ಯವಾಗಿದೆ. ಬಾಕಿ ಇರುವ ತೆರಿಗೆಯನ್ನು ಸಹ ಪಾವತಿ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಕೋರಿದೆ.

  • ಕೃಷ್ಣಪ್ಪ ಧರ್ಮರ
    ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಲಕ್ಷ್ಮೇಶರ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments