ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರು ಗ್ರಾಮದ ಹೊರವಲಯದಲ್ಲಿ ಖಾಸಗಿ ಶಾಲಾ ಬಸ್‌ನ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎಲ್‌ಕೆಜಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಈ ದುರ್ಘಟನೆಯಿಂದ ಗ್ರಾಮದಲ್ಲಿ ಶೋಕ ಹಾಗೂ ಆಕ್ರೋಶದ ವಾತಾವರಣ ಆವರಿಸಿದೆ.
ಮೃತ ಬಾಲಕನನ್ನು ಪ್ರಥಮ ಅರುಣ ಲಮಾಣಿ (4) ಎಂದು ಗುರುತಿಸಲಾಗಿದೆ. ಪ್ರಥಮ ಉಳ್ಳಟ್ಟಿ ಗ್ರಾಮದ ಲಿಟಲ್ ಹಾಟ್ಸ್ ಸ್ಕೂಲ್ನಲ್ಲಿ ಎಲ್‌ಕೆಜಿ ವಿದ್ಯಾರ್ಥಿಯಾಗಿದ್ದ. ಮೃತ ಬಾಲಕನ ತಂದೆ ಭಾರತೀಯ ಸೈನಿಕ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಜೆ ಮೇಲೆ ಸ್ವಗ್ರಾಮದಲ್ಲಿದ್ದರು.
ಪ್ರಥಮ ಪ್ರತಿದಿನದಂತೆ ಶಾಲಾ ಬಸ್‌ನಲ್ಲಿ ಶಾಲೆಗೆ ತೆರಳಿದ್ದನು.ಆದರೆ ಶಾಲೆಯಿಂದ ಮರಳಿ ತನ್ನೂರು ದೊಡ್ಡೂರು ತಾಂಡಾಕ್ಕೆ ವಿದ್ಯಾರ್ಥಿಯನ್ನ ಬಸ್ ನಲ್ಲಿ ಮನೆಗೆ ಬಿಡುವ ವೇಳೆ, ದೊಡ್ಡೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಬಸ್ ಚಲಿಸುತ್ತಿದ್ದ ಸಂದರ್ಭದಲ್ಲಿ ಸುಮಾರು 300 ಮೀಟರ್ ಹಿಂದೆಯೇ ಬಸ್ ನ ಡೋರ್ ನಿಂದ ವಿದ್ಯಾರ್ಥಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಬಸ್ ಚಾಲಕ ಹಾಗೂ ಸಹಾಯಕ (ಕಿನ್ನರ್) ಈ ವಿಷಯವನ್ನು ತಕ್ಷಣ ಗಂಭೀರವಾಗಿ ಪರಿಗಣಿಸದೇ, ಮಗುವನ್ನು ಆಸ್ಪತ್ರೆಗೆ ದಾಖಲಿಸುವ ಬದಲು, ಸ್ಥಳದಲ್ಲೇ ಬಿದ್ದ ಮಗುವನ್ನ ಎತ್ತಿ ಮತ್ತೆ ಬಸ್‌ಗೆ ಹಾಕಿಕೊಂಡು ಯಾರಿಗೂ ಮಾಹಿತಿ ನೀಡದೇ ಬಸ್ ಮುಂದುವರಿಸಿಕೊಂಡು ಹೋಗಿ, ಉಳಿದ ವಿದ್ಯಾರ್ಥಿಗಳ ಸಮೇತವೇ ಯಾರೂ ಇಲ್ಲದ ಪ್ರದೇಶದಲ್ಲಿ ಬಸ್ ನಿಲ್ಲಿಸಿ,ಎಸ್ಕೇಪ್ ಆಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರಂದನ ಮುಗಿಲು ಮುಟ್ಟಿಸಿದ್ದು, ಮಗುವಿನ ಅಕಾಲಿಕ ಸಾವಿನಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ. ನಿರ್ಲಕ್ಷ್ಯ, ಅಜಾಗರೂಕತೆ ಹಾಗೂ ಶಾಲಾ ಬಸ್‌ನ ಸುರಕ್ಷತಾ ಲೋಪವೇ ಈ ದುರಂತಕ್ಕೆ ಕಾರಣ ಎಂಬ ಆರೋಪಗಳು ಸ್ಥಳೀಯರಿಂದ ವ್ಯಕ್ತವಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ, ಸಹಾಯಕ (ಕಿನ್ನರ್) ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಾಲಾ ವಾಹನಗಳ ಸುರಕ್ಷತೆ, ಮಕ್ಕಳ ಮೇಲಿನ ಜವಾಬ್ದಾರಿ ಹಾಗೂ ನಿಯಮಗಳ ಪಾಲನೆ ಬಗ್ಗೆ ಅಧಿಕಾರಿಗಳು ಗಂಭೀರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಈ ದುರ್ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
