Home » News » ಲಕ್ಕುಂಡಿ ನಿಧಿ ಪತ್ತೆ ಪ್ರಕರಣ: ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ: ಪ್ರಾಮಾಣಿಕ ಬಾಲಕ ಪ್ರಜ್ವಲ್ ನಡೆ ನಿಧಿಗಿಂತ ದೊಡ್ಡದು – ಸಚಿವರ ಪ್ರಶಂಸೆ..

ಲಕ್ಕುಂಡಿ ನಿಧಿ ಪತ್ತೆ ಪ್ರಕರಣ: ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ: ಪ್ರಾಮಾಣಿಕ ಬಾಲಕ ಪ್ರಜ್ವಲ್ ನಡೆ ನಿಧಿಗಿಂತ ದೊಡ್ಡದು – ಸಚಿವರ ಪ್ರಶಂಸೆ..

by CityXPress
0 comments

ಗದಗ:
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ನಿಧಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ,‌ನಂತರ ಗ್ರಾಮದ ಲಕ್ಮ್ಮೀನಾರಾಯಣ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

🖋ವರದಿ: ಮಹಲಿಂಗೇಶ ಹಿರೇಮಠ.ಗದಗ

ರಾಷ್ಟ್ರಕೂಟರು ಮತ್ತು ಚಾಲುಕ್ಯರು ಆಳ್ವಿಕೆ ನಡೆಸಿದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿ ಒಂದು ವಿಶಿಷ್ಟ ಸ್ಥಳವಾಗಿದೆ. ಇಂತಹ ಪುರಾತನ ಮತ್ತು ಮಹತ್ವದ ಪ್ರದೇಶಗಳಲ್ಲಿ ಕೆಲವೊಮ್ಮೆ ಅಚ್ಚರಿಯ ಘಟನೆಗಳು ಸಂಭವಿಸುವುದು ಸಹಜ ಎಂದು ಸಚಿವರು ಹೇಳಿದರು.

ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು. ಪತ್ತೆ ಆಗಿರುವ ನಿಧಿಯಲ್ಲಿ 466 ಗ್ರಾಂ ಚಿನ್ನಾಭರಣಗಳು ಮತ್ತು 634 ಗ್ರಾಂ ತಾಮ್ರದ ತಂಬಿಗೆ ಪತ್ತೆಯಾಗಿದ್ದು, ಅವುಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸಂಪೂರ್ಣ ಘಟನೆ ಬೆಳಕಿಗೆ ಬರಲು ಕಾರಣನಾದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ನಿಜಕ್ಕೂ ಅನುಕರಣೀಯ ಎಂದು ಸಚಿವರು ಶ್ಲಾಘಿಸಿದರು.

banner

ಪ್ರಜ್ವಲ್ ರಿತ್ತಿ ಅವರು ಪತ್ತೆಯಾದ ತಾಮ್ರದ ತಂಬಿಗೆಯನ್ನು ದೇವರ ಕೋಣೆಯಲ್ಲಿ ಸುರಕ್ಷಿತವಾಗಿ ಇಟ್ಟು ಕೀಲಿ ಹಾಕಿ ಭದ್ರಪಡಿಸಿದ್ದರು. ನಂತರ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ, ಪತ್ತೆಯಾದ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿರುವುದು ಅಪೂರ್ವ ಉದಾಹರಣೆ ಎಂದು ಹೇಳಿದರು.

ಈ ವಿಚಾರ ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಾಗ, “ನಿಧಿ ಎಷ್ಟೇ ದೊಡ್ಡದಾಗಿರಲಿ, ಆದರೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿರುವ ಈ ಬಾಲಕನ ನಡೆ ನಿಧಿಗಿಂತಲೂ ದೊಡ್ಡದು” ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಚಿವರು ತಿಳಿಸಿದರು.

ಕಾನೂನಿನ ಪ್ರಕಾರ ಪತ್ತೆಯಾದ ನಿಧಿಯನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಬಡ ಕುಟುಂಬ ಹಿನ್ನೆಲೆಯಲ್ಲಿರುವ ರಿತ್ತಿ ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಈ ಕುಟುಂಬಕ್ಕೆ ನೀಡುವ ಯಾವುದೇ ಗೌರವವು ಇಡೀ ಲಕ್ಕುಂಡಿ ಗ್ರಾಮಕ್ಕೆ ನೀಡಿದ ಗೌರವವಾಗುತ್ತದೆ ಎಂದು ಸಚಿವರು ಹೇಳಿದರು.

ಈ ಕುರಿತು ನಾಳೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಕುಟುಂಬಕ್ಕೆ ಯಾವ ರೀತಿಯ ಗೌರವ ಮತ್ತು ನೆರವು ನೀಡಬೇಕು ಎಂಬ ನಿರ್ಧಾರವನ್ನು ನಾಳೆ ಸಂಜೆಯೊಳಗೆ ಪ್ರಕಟಿಸಲಾಗುವುದು ಎಂದು ಹೇಳಿದರು.

ಜಗತ್ತಿನಾದ್ಯಂತ ಇಂತಹ ಘಟನೆಗಳನ್ನು ನೋಡಿದಾಗ, ಸಿಕ್ಕ ಅಮೂಲ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿರುವ ಉದಾಹರಣೆಗಳು ಬಹಳ ವಿರಳ. ಲಕ್ಕುಂಡಿಯ ಪ್ರಾಚ್ಯವಸ್ತು ಸಂಗ್ರಹ ಕಾರ್ಯಕ್ರಮದಡಿ, ಗ್ರಾಮಸ್ಥರು ಈಗಾಗಲೇ 1100 ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಈ ಗ್ರಾಮದ ಸಂಸ್ಕೃತಿ ಮತ್ತು ಹಿರಿಮೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಈ ಗ್ರಾಮದಿಂದ ಇನ್ನೂ ಅನೇಕ ಅದ್ಭುತ ಐತಿಹಾಸಿಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ. ಈಗಾಗಲೇ ಲಕ್ಕುಂಡಿಯಲ್ಲಿನ 16 ದೇವಸ್ಥಾನಗಳು ಮತ್ತು 16 ಬಾವಿಗಳನ್ನು ಸರ್ಕಾರ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. ಅಲ್ಲದೆ 165 ಲಕ್ಷ ರೂ. ವೆಚ್ಚದಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ ಎಂದರು.

ಅಧಿಕಾರಿಗಳ ಹೇಳಿಕೆಯಿಂದ ಉಂಟಾಗಿದ್ದ ಗೊಂದಲವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಬಗೆಹರಿಸಿದ್ದು, ಲಕ್ಕುಂಡಿ ಗ್ರಾಮ ತನ್ನ ಪ್ರಾಮಾಣಿಕತೆಯ ಜೊತೆಗೆ ತನ್ನ ಐತಿಹಾಸಿಕ ಹಿರಿಮೆಯನ್ನೂ ಮತ್ತೊಮ್ಮೆ ಎತ್ತಿ ಹಿಡಿದಿದೆ ಎಂದು ಸಚಿವರು ಹೇಳಿದರು.

ಮುಂದಿನ ದಿನಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಲಕ್ಕುಂಡಿಯ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಕಾನೂನು ಪ್ರಕಾರ ರಿತ್ತಿ ಕುಟುಂಬಕ್ಕೆ ನೀಡಬೇಕಾದ ಎಲ್ಲಾ ಗೌರವ ಮತ್ತು ನೆರವನ್ನು ಸರ್ಕಾರ ಖಚಿತವಾಗಿ ನೀಡಲಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಭರವಸೆ ನೀಡಿದರು.

ಇದೇ ವೇಳೆ ರಿತ್ತಿ‌ ಕುಟುಂಬದ‌ ಸದಸ್ಯರಿಗೆ ಸಚಿವರು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಪ್ರಾಧಿಕಾರ ಸದಸ್ಯ ಸಿದ್ದು‌ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb