ಗದಗ:ಜೆಡಿಎಸ್ ಪಕ್ಷದ ಮುಖಂಡರು ಗದಗ ನಗರದಲ್ಲಿ ಭಿಕ್ಷುಕರಾಗಿದ್ದಾರೆ. ಆದರೆ ಯಾವ ಉದ್ದೇಶಕ್ಕೆ ಅಂತೀರಾ? ಸರ್ಕಾರಕ್ಕೆ ಹಾಗೂ ಸ್ಥಳಿಯ ಜನಪ್ರತಿನಿಧಿಗಳಿಗೆ ತಮ್ಮ ಭಿಕ್ಷಾಟನೆ ಮೂಲಕ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ ಅವರ ಗಮನಕ್ಕೆ ತರಲು ಜೆಡಿಎಸ್ ಪಕ್ಷದ ಮುಖಂಡರು ಇಂದು ಗದಗ ನಗರದಲ್ಲಿ ಭಿಕ್ಷಾಟನೆ ಮಾಡಿದ್ದಾರೆ.
ಅಷ್ಟಕ್ಕೂ ಈ ಭಿಕ್ಷಾಟನೆ ಉದ್ದೇಶ, ಲಕ್ಷಾಂತರ ಅಂಧ ಅನಾಥರ ಮಕ್ಕಳ ಬಾಳಿಗೆ ಬೆಳಕಾಗಿರೋ ಲಿಂ.ಪುಟ್ಟರಾಜ ಗವಾಯಿಗಳು ಯಾರಿಗೆ ಗೊತ್ತಿಲ್ಲ ಹೇಳಿ! ಅಂಥಹ ಪುಣ್ಯಪುರುಷನ ಸ್ಮಾರಕ ಭವನದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಲ್ಲಿ ಹಣ ಇದ್ದಂತಿಲ್ಲ. ಹೀಗಾಗಿ ನಾವೇ ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ನೀಡುತ್ತೇವೆ ಅಂತ ಜೆಡಿಎಸ್ ಕಾರ್ಯಕರ್ತರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ವಕ್ತಾರ ವ್ಹಿ ಆರ್ ಗೋವಿಂದಗೌಡ್ರ ನೇತೃತ್ವದಲ್ಲಿ ಭಿಕ್ಷಾಟನೆ ಮಾಡಲಾಗಿದ್ದು, ಪುಟ್ಟರಾಜ ಗವಾಯಿಗಳ ಮಠದಿಂದ ಭಿಕ್ಷಾಟನೆ ಆರಂಭ ಮಾಡಿದ್ರು. ಎಪಿಎಂಸಿ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡಿದ್ದಾರೆ. ಸರ್ಕಾರ ಹಣ ಬಿಡುಗಡೆಗೊಳಿಸದಿದ್ರೆ ಜಿಲ್ಲೆಯಾಧ್ಯಂತ ಭಿಕ್ಷಾಟಣೆ ಮಾಡುತ್ತೇವೆ. ಅರ್ಧಕ್ಕೆ ನಿಂತ ಪುಟ್ಚರಾಜ ಸಭಾಭವನ ಕಾಮಗಾರಿಗೆ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಎಂಟು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷತನವೇ ಕಾರಣ ಎಂದು ಗೋವಿಂದಗೌಡ್ರ ಆರೋಪಿಸಿದ್ದಾರೆ.
*ಸ್ಮಾರಕ ಭವನದ ಹಿನ್ನೋಟ*
ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ 5 ಕೋಟಿ ಅನುದಾನ ಘೋಷಣೆ ಮಾಡಿದ್ರು. ಮಾರ್ಚ್ 25, 2011ರಂದು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಮಾಡಿತ್ತು. ಗದಗ ಶಾಸಕ ಹೆಚ್. ಕೆ ಪಾಟೀಲ್ 2016 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 5 ಕೋಟಿ ಅನುದಾನ ತರುವಲ್ಲಿ ಹಚ್ಚಿನ ಕಾಳಜಿ ವಹಿಸಿದ್ರು. ಲೋಕೋಪಯೋಗಿ ಇಲಾಖೆ ಮೂಲಕ ಮಹಾರಾಷ್ಟ್ರ ಮೂಲದ ಶಿರ್ಕೆ ಕನ್ಸಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದ್ರೆ, 8 ವರ್ಷಗಳು ಕಳೆದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ಸ್ಮಾರಕ ಭವನದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
5 ಕೋಟಿಯ ಅನುಮೋದನೆ ನೀಡಿದ್ದ ಕಟ್ಟಡ 6.25 ಕೋಟಿ ಖರ್ಚು ಮಾಡಿದ್ರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅರ್ಧಕ್ಕೆ ಕಾಮಗಾರಿ ನಿಂತು ಹೋಗಿದೆ.
ಸಚಿವ ಎಚ್ ಕೆ ಪಾಟೀಲ್ ಕಳೆದ ವರ್ಷ ಪ್ರವಾಸೋದ್ಯಮ ಸಚಿವರಾದ ಬಳಿಕ ಶ್ರೀಮಠಕ್ಕೆ ಭೇಟಿ ನೀಡಿ ಶೀಘ್ರವೇ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ರು. ಆದ್ರೆ, ವರ್ಷ ಕಳೆದ್ರೂ ಕಾಮಗಾರಿ ಮುಗಿಯುವದಿರಲಿ ಆರಂಭ ಕೂಡ ಆಗಿಲ್ಲ. ಇನ್ನು ಕಟ್ಟಡದ ಅನುದಾನದ ಬಗ್ಗೆಯೇ ಸಾಕಷ್ಟು ಅನುಮಾನ ಮೂಡುತ್ತಿದೆ. ಆರಂಭದಲ್ಲಿ ಕಟ್ಟಡ ಪೂರ್ಣಗೊಳ್ಳಲು 5 ಕೋಟಿ ಎಸ್ಟಿಮೆಟ್ ಮಾಡಲಾಗಿತ್ತು. ಆ ಮೇಲೆ 1.25 ಕೋಟಿ ಹೆಚ್ಚುವರಿ ಹಣ ನೀಡಲಾಗಿದೆ. ಆದ್ರೆ, ಈಗ ಮತ್ತೆ 5 ಕೋಟಿ ಹಣ ಬೇಕು ಅಂತ ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.